ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ, ಆರೆಂಜ್ ಅಲರ್ಟ್ ಘೋಷಣೆ
ಗೋದಾವರಿ ನದಿ (ಆಂಧ್ರಪ್ರದೇಶ), ಬಾಗಮತಿ ನದಿ ಮತ್ತು ಕೋಸಿ ನದಿ (ಬಿಹಾರ), ಕಾವೇರಿ ನದಿ (ಕರ್ನಾಟಕ), ಮತ್ತು ಗಂಗಾ ನದಿ (ಉತ್ತರ ಪ್ರದೇಶ) ಸೇರಿದಂತೆ ಹಲವಾರು ನದಿಗಳ ನೀರಿನ ಮಟ್ಟ ಅಧಿಕವಾಗಿದೆ.
ನವದೆಹಲಿ: ದೇಶದ ಹಲವಾರು ರಾಜ್ಯಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಜಲ ಆಯೋಗ ಸೋಮವಾರ ಎಚ್ಚರಿಸಿದೆ. ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಗೋದಾವರಿ ನದಿ (ಆಂಧ್ರಪ್ರದೇಶ), ಬಾಗಮತಿ ನದಿ ಮತ್ತು ಕೋಸಿ ನದಿ (ಬಿಹಾರ), ಕಾವೇರಿ ನದಿ (ಕರ್ನಾಟಕ), ಮತ್ತು ಗಂಗಾ ನದಿ (ಉತ್ತರ ಪ್ರದೇಶ) ಸೇರಿದಂತೆ ಹಲವಾರು ನದಿಗಳ ನೀರಿನ ಹರಿವು ಅಧಿಕವಾಗಿದ್ದು ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಮಧ್ಯಪ್ರದೇಶದ 11 ಜಿಲ್ಲೆಗಳಲ್ಲಿ ಸೋಮವಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ರಾಜ್ಯದ ಕನಿಷ್ಠ 32 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಭೋಪಾಲ್, ಸಾಗರ್, ಹರ್ದಾ, ರೈಸನ್, ವಿದಿಶಾ, ಸೆಹೋರ್, ರಾಜ್‌ಗಢ, ಬೈತುಲ್, ದೇವಾಸ್ ಮತ್ತು ಅಶೋಕ್‌ನಗರ ಸೇರಿದಂತೆ 32 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.