ಗುವಾಹಟಿ: ಅಸ್ಸಾಂನಲ್ಲಿ ಇನ್ನೂ ಐದು ಸಾವುಗಳು ಸಂಭವಿಸಿದ್ದು ಪ್ರವಾಹ (Flood) ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 84ಕ್ಕೆ ಏರಿದೆ. ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 110ಕ್ಕೆ ಏರಿದೆ. ಭಾನುವಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದ 33 ಜಿಲ್ಲೆಗಳಲ್ಲಿ 24 ಜಿಲ್ಲೆಗಳಲ್ಲಿ ಸುಮಾರು 25.29 ಲಕ್ಷ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಗೋಲ್ಪಾರದಲ್ಲಿ ಪ್ರವಾಹವು ಗರಿಷ್ಠ 4.53 ಲಕ್ಷ ಜನರ ಮೇಲೆ ಪರಿಣಾಮ ಬೀರಿದ್ದರೆ ಬಾರ್‌ಪೇಟಾದಲ್ಲಿ 3.44 ಲಕ್ಷಕ್ಕೂ ಹೆಚ್ಚು ಜನರು ಮತ್ತು ಮೊರಿಗಾಂವ್‌ನಲ್ಲಿ 3.41 ಲಕ್ಷ ಜನರು ಪ್ರವಾಹದಿಂದಾಗಿ ಬಾಧಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರೊಂದಿಗೆ ದೂರವಾಣಿ ಮೂಲಕ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಿದ್ದು ಅಸ್ಸಾಂನಲ್ಲಿನ ಪ್ರವಾಹದಿಂದಾಗಿ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಿರುವ ಎಲ್ಲ ಸಹಾಯ ಕೇಂದ್ರ ಸರ್ಕಾರದಿಂದ ಲಭ್ಯವಾಗಲಿದೆ ಎಂದು ಭರವಸೆ ನೀಡಿದ್ದಾರೆ.


ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಒದಗಿಸಿರುವ ಅಸ್ಸಾಂ (Assam) ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಅಸ್ಸಾಂನಲ್ಲಿನ ಪ್ರವಾಹ, ಕೋವಿಡ್ -19 (Covid-19) ಗೆ ಸಂಬಂಧಿಸಿದ ಪರಿಸ್ಥಿತಿ ಮತ್ತು ಬಾಗ್ಜನ್ ತೈಲ ಬಾವಿಯಲ್ಲಿನ ಬೆಂಕಿಗೆ ಸಂಬಂಧಿಸಿದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆಯಲು ಫೋನ್ ಸಂಭಾಷಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಾಯ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು.


ಪ್ರಸ್ತುತ ರಾಜ್ಯದಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸೋನೊವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಎಂ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪ್ರಧಾನಿ ಕಚೇರಿಯಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರವಾಹ, ಭೂ ಕುಸಿತ, ಕೋವಿಡ್ -19 ಮತ್ತು ಬಾಗಜನ್ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಬಿಕ್ಕಟ್ಟಿನ ಈ ಸಮಯದಲ್ಲಿ ಅಸ್ಸಾಂ ಜನರೊಂದಿಗೆ ನಿಂತಿದೆ ಎಂದು ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ.


ಬ್ರಹ್ಮಪುತ್ರ ಮತ್ತು ಇತರ ಉಪನದಿಗಳಿಂದ ಉಂಟಾಗುವ ಸವೆತದಿಂದಾಗಿ ರಾಜ್ಯದ ಅನೇಕ ಪ್ರದೇಶಗಳು, ಕೃಷಿ ಭೂಮಿ ಮತ್ತು ಮನೆಗಳು ಕೆಟ್ಟ ಪರಿಣಾಮ ಬೀರಿವೆ ಎಂದು ಸೋನೊವಾಲ್ ಮೋದಿಗೆ ಮಾಹಿತಿ ನೀಡಿದರು. ಪ್ರವಾಹ ಮತ್ತು ಮಣ್ಣಿನ ಸವೆತದ ಸಮಸ್ಯೆಗಳನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಾನಿಯನ್ನು ಅಂದಾಜು ಮಾಡಲು ಮತ್ತು ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆಗಳನ್ನು ನೋಡಲು ಮುಖ್ಯಮಂತ್ರಿ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.


ಕೋವಿಡ್ -19 ಬಗ್ಗೆ ಸೋನೊವಾಲ್ ಅವರು ಪ್ರಧಾನ ಮಂತ್ರಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯು ತನಿಖಾ ಸಾಮರ್ಥ್ಯವನ್ನು ಹೆಚ್ಚಿಸಿದೆ, ಆದ್ದರಿಂದ ಈಗ ಹೆಚ್ಚಿನ ಜನರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಪ್ರಧಾನಿ ಅವರೊಂದಿಗಿನ ಸಂಭಾಷಣೆಯಲ್ಲಿ ಪರಿಹಾರ ಶಿಬಿರಗಳಲ್ಲಿರುವ ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸೋನೊವಾಲ್ ಅವರಿಗೆ ಮಾಹಿತಿ ನೀಡಿದರು ಮತ್ತು ಈ ಶಿಬಿರಗಳಲ್ಲಿ ಕೋವಿಡ್ -19 ಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿದರು. 50 ಜಿಲ್ಲೆಗಳಲ್ಲಿ 50,559 ಜನರು ಆಶ್ರಯ ಪಡೆದಿರುವ 18 ಜಿಲ್ಲೆಗಳಲ್ಲಿ 521 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಡೆಸಲಾಗುತ್ತಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಧುಬ್ರಿ ಮತ್ತು ಗೋಲ್ಪಾರದಲ್ಲಿ, ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಉಪನದಿಗಳು ಸಹ ಅನೇಕ ಸ್ಥಳಗಳಲ್ಲಿ ಅಪಾಯದ ಗುರುತುಗಿಂತ ಮೇಲಿವೆ ಎಂದು ಹೇಳಲಾಗಿದೆ.