ರಾಜಸ್ಥಾನ: ರಾಜ್ಯಸಭೆಯ ಉಪಚುನಾವಣೆಗೆ ಡಾ. ಮನಮೋಹನ್ ಸಿಂಗ್ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ
ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ 100 ಶಾಸಕರಲ್ಲದೆ 12 ಸ್ವತಂತ್ರರು, 6 ಬಿಎಸ್ಪಿ, 2 ಬಿಟಿಪಿ, 1 ಆರ್ಎಲ್ಡಿ ಮತ್ತು 1 ಸಿಪಿಎಂ ಶಾಸಕರ ಬೆಂಬಲವನ್ನು ಹೊಂದಿದೆ.
ಜೈಪುರ: ರಾಜ್ಯಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇದೇ ಆಗಸ್ಟ್ 26ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಇಂದು ಬೆಳಿಗ್ಗೆ 10:30ಕ್ಕೆ ಜೈಪುರ ತಲುಪಲಿರುವ ಡಾ. ಮನಮೋಹನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಕೂಡ ಅವರಿಗೆ ಸಾಥ್ ನೀಡಲಿದ್ದಾರೆ. ಬೆಳಿಗ್ಗೆ 11:00 ಗಂಟೆಗೆ ಡಾ.ಮನಮೋಹನ್ ಸಿಂಗ್ ಅವರ ನಾಮಪತ್ರ ಸಲ್ಲಿಸಲಿದ್ದಾರೆ.
ರಾಜಸ್ಥಾನದಲ್ಲಿ 10 ರಾಜ್ಯಸಭಾ ಸ್ಥಾನಗಳಿವೆ. ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ಲಾಲ್ ಸೈನಿ ಅವರ ನಿಧನದ ನಂತರ ರಾಜ್ಯಸಭೆಯ ಒಂದು ಸ್ಥಾನ ಖಾಲಿಯಾಗಿದೆ. ಆ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಿಗೆ 100 ಶಾಸಕರ ಬೆಂಬಲ ಬೇಕು. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ 100 ಶಾಸಕರಲ್ಲದೆ 12 ಸ್ವತಂತ್ರರು, 6 ಬಿಎಸ್ಪಿ, 2 ಬಿಟಿಪಿ, 1 ಆರ್ಎಲ್ಡಿ ಮತ್ತು 1 ಸಿಪಿಎಂ ಶಾಸಕರ ಬೆಂಬಲವನ್ನು ಹೊಂದಿದೆ.
ರಾಜಸ್ಥಾನ ರಾಜ್ಯಸಭಾ ಉಪಚುನಾವಣೆಯಲ್ಲಿ ಮನಮೋಹನ್ ಸಿಂಗ್ ಅವರನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷ ಘೋಷಿಸಿದೆ. ರಾಜಸ್ಥಾನ ಬಿಎಸ್ಪಿ ವಿಧಾನಸಭಾ ಮುಖಂಡ ಲಖನ್ ಸಿಂಗ್ ಸೋಮವಾರ ಈ ಮಾಹಿತಿ ನೀಡಿದ್ದಾರೆ. ರಾಜ್ಯದ ಒಂದು ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಸಿಂಗ್ ಹೇಳಿದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ನ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬಿಎಸ್ಪಿ ಬೆಂಬಲಿಸಿದೆ. ಇದಕ್ಕೂ ಮುನ್ನ ಮನಮೋಹನ್ ಸಿಂಗ್ ಅವರು ಅಸ್ಸಾಂ ಅನ್ನು ರಾಜ್ಯಸಭೆಯಲ್ಲಿ 28 ವರ್ಷಗಳಿಂದ ಪ್ರತಿನಿಧಿಸಿದ್ದಾರೆ.