ಬೆಂಗಳೂರು: ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಪ್ರವಾಸಿಗರ ಬಸ್ ನೀಲ್ ಗಿರೀಸ್ ಜಿಲ್ಲೆಯ ಥವಲಮಲೈ ಬಳಿಯ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿರುವ ಘಟನೆ ಶನಿವಾರ ತಡರಾತ್ರಿ 3 ಗಂಟೆಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಬೆಂಗಳೂರಿನ ನಾಲ್ವರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅದರಲ್ಲಿ 10 ಕ್ಕೂ ಹೆಚ್ಚೂ ಪ್ರವಾಸಿಗರಿಗೆ ಗಂಭೀರ ಗಾಯಗಲಾಗಿರುವುದಾಗಿ ವರದಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ವಿದ್ಯಾರಣ್ಯಪುರದ ಸುಮಾರು 30 ಜನರು ಬೆಂಗಳೂರಿನ ಟ್ರ್ಯಾವೆಲ್ಸ್ ಗೆ ಸೇರಿದ ಬಸ್ ನಲ್ಲಿ ನೆನ್ನೆ ಬೆಳಗ್ಗಿನ ಜಾವ 3 ಘಂಟೆಗೆ ಊಟಿ ಪ್ರವಾಸಕ್ಕೆ ತೆರಳಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಊಟಿ, ಮಡಿಕೇರಿ ಪ್ರವಾಸ ಮುಗಿಸಿ ಭಾನುವಾರ ರಾತ್ರಿ ಬೆಂಗಳೂರಿಗೆ ಬರಬೇಕಿತ್ತು. ನೆನ್ನೆ ಊಟಿಯಲ್ಲಿ ಸ್ಥಳೀಯ ದೃಶ್ಯ ವೀಕ್ಷಣೆ ಮುಗಿಸಿ ಮಡಿಕೇರಿಯತ್ತ ಹೊರಟಿದ್ದ ಬಸ್ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.


ಮೃತ ದೇಹಗಳನ್ನು ನಡುವಾತಂ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಾಯಳುಗಳನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.