ನವದೆಹಲಿ: ನಾಲ್ಕು ಹೊಸ ನ್ಯಾಯಾಧೀಶರು ಇಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಜೆಐ ರಂಜನ್ ಗೊಗೊಯ್ ನಾಲ್ವರು ನ್ಯಾಯಾಧೀಶರಿಗೆ ಪ್ರಮಾಣ ವಚನ ಭೋದಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಾಧೀಶರು ಮತ್ತು ಹಲವಾರು ವಕೀಲರು ಉಪಸ್ಥಿತರಿದ್ದರು. 


COMMERCIAL BREAK
SCROLL TO CONTINUE READING

ಈ ಮೊದಲು ಹಿಮಾಚಲ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ವಿ. ರಾಮಸುಬ್ರಮಣಿಯನ್, ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರವೀಂದ್ರ ಭಟ್, ಪಂಜಾಬ್ ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿಷಿಕೇಶ್ ರಾಯ್ ಸುಪ್ರೀಂ ಕೋರ್ಟ್‌ನ ನೂತನ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.


ಇತ್ತೀಚೆಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸಂಖ್ಯೆಯನ್ನು 30 ರಿಂದ 34 ಕ್ಕೆ ಹೆಚ್ಚಿಸಿತ್ತು. ಸುಪ್ರೀಂ ಕೋರ್ಟ್‌ಗೆ ನಾಲ್ವರು ನೂತನ ನ್ಯಾಯಾಧೀಶರ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದಿಸಿದ್ದಾರೆ. ಈವರೆಗೆ ಸುಪ್ರೀಂ ಕೋರ್ಟ್‌ನಲ್ಲಿ 30 ನ್ಯಾಯಾಧೀಶರು ಇದ್ದರು, ಆದರೆ ಹೊಸ ನ್ಯಾಯಾಧೀಶರ ಪ್ರಮಾಣವಚನ ಸ್ವೀಕರಿಸಿದ ನಂತರ, ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 34ಕ್ಕೆ ಏರಿದೆ.


ಗಮನಿಸಬೇಕಾದ ಅಂಶವೆಂದರೆ ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಏಕ ಸದಸ್ಯ ಪೀಠ ರಚನೆಯಾಗಲಿದೆ. ಬಾಕಿ ಇರುವ ಪ್ರಕರಣಗಳ ಹೊರೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ಕನಿಷ್ಠ 2 ನ್ಯಾಯಾಧೀಶರ ನ್ಯಾಯಪೀಠ(ದ್ವಿಸದಸ್ಯ ಪೀಠ) ಪ್ರಕರಣಗಳ ವಿಚಾರಣೆ ಕೇಳುತ್ತಿತ್ತು. ಏಕ ನ್ಯಾಯಾಧೀಶರ ನ್ಯಾಯಪೀಠವು 7 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯ ಸಂದರ್ಭದಲ್ಲಿ ನಿರೀಕ್ಷಿತ ಜಾಮೀನು, ಪ್ರಕರಣ ವರ್ಗಾವಣೆಯನ್ನು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಆಲಿಸಲಿದೆ.