ಬಿಸಿಲಿನ ತಾಪಕ್ಕೆ ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ನಾಲ್ವರು ಪ್ರಯಾಣಿಕರು ಬಲಿ
ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಝಾನ್ಸಿ: ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ. ತೀವ್ರ ಅಸ್ವಸ್ಥಗೊಂಡಿದ್ದ ಓರ್ವ ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.
ವರದಿಗಳ ಪ್ರಕಾರ, ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರು ಸೋಮವಾರ ಸಂಜೆ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಆದರೆ ಝಾನ್ಸಿ ತಲುಪುವುದರೊಳಗೆ ಮೃತಪತ್ತಿದ್ದಾರೆ. ಮೃತ ದೇಹಗಳನ್ನು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲಾ ನಾಲ್ಕು ಪ್ರಯಾಣಿಕರು ಆಗ್ರಾದಿಂದ ಕೊಯಮತ್ತೂರಿಗೆ S-8 ಮತ್ತು S-9 ಭೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
"ಮೃತ ದೇಹಗಳನ್ನು ಮರಣೋತ್ತರ ಪರಿಕ್ಷೆ ಬಳಿಕ ಕೊಯಮತ್ತೂರಿಗೆ ಕಳುಹಿಸಲಾಗುವುದು. ಆಗ್ರಾ ಮತ್ತು ವಾರಾಣಾಸಿಗೆ ಭೇಟಿ ನೀಡಿದ್ದ 68 ಪ್ರಯಾಣಿಕರ ತಂಡದಲ್ಲಿ ಈ ನಾಲವ್ರು ಪ್ರಯಾಣಿಸುತ್ತಿದ್ದರು" ಎಂದು ರೈಲ್ವೆ ವಿಭಾಗೀಯ ಮ್ಯಾನೇಜರ್ ನೀರಜ್ ಅಂಬಿಶ್ಟ್ ಹೇಳಿದ್ದಾರೆ.
ಮೃತರನ್ನು ಬುಂದೂರ್ ಪಳನಿಶೇಮ್(80), ಬಾಲಕೃಷ್ಣ ರಾಮಸ್ವಾಮಿ(69), ಚಿನ್ನಾರೆ(71) ಮತ್ತು ದಿವಾ ನಾಯ್(71) ಎಂದು ಗುರುತಿಸಲಾಗಿದೆ. ಸುಬ್ಬರಾಯಯ್ಯ(71) ಅವರನ್ನು ಝಾನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.