ನವದೆಹಲಿ: ಫೆಬ್ರವರಿ 14, ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಯೋಧರನ್ನು ಸ್ಮರಿಸಿಕೊಂಡರು.


COMMERCIAL BREAK
SCROLL TO CONTINUE READING

"ಈ ದಿನದಂದು ಪುಲ್ವಾಮಾ ದಾಳಿಯಲ್ಲಿ ಅಸುನೀಗಿದ ನಮ್ಮ ವೀರರನ್ನು ಸ್ಮರಿಸೋಣ. ಅವರ ಪರಮೋಚ್ಛ ತ್ಯಾಗವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಧೈರ್ಯ ನಮಗೆ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಓರ್ವ ಆತ್ಮಹತ್ಯಾ ದಾಳಿಕೋರ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ, ಸ್ಫೋಟಿಸಿದ ಪರಿಣಾಮವಾಗಿ 40ಕ್ಕೂ ಹೆಚ್ಚು ಯೋಧರು ಅಸುನೀಗಿದ್ದರು.


ಈ ದಾಳಿಗೆ ಉಗ್ರ ಪ್ರತಿಕ್ರಿಯೆ ನೀಡಿದ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ದಾಳಿ ನಡೆಸಿತು.


ಪುಲ್ವಾಮಾ ದಾಳಿಯಲ್ಲಿ ಏನಾಯಿತು?
2019ರ ಪ್ರೇಮಿಗಳ ದಿನಾಚರಣೆಯಂದು, ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ ಓರ್ವ ವ್ಯಕ್ತಿ ವಾಹನವೊಂದನ್ನು ಚಲಾಯಿಸುತ್ತಾ ಬಂದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು, ಸ್ಫೋಟಿಸಿದನು. ಇದರ ಪರಿಣಾಮವಾಗಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಅಸುನೀಗಿದರು. ವಿಶ್ವ ಸಂಸ್ಥೆ, ಅಮೆರಿಕಾ, ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್, ಸೌದಿ ಅರೇಬಿಯಾ, ಶ್ರೀಲಂಕಾ, ಮತ್ತು ಬಾಂಗ್ಲಾದೇಶ ಸರ್ಕಾರಗಳು ಈ ದಾಳಿಯನ್ನು ಖಂಡಿಸಿ, ಭಯೋತ್ಪಾದನಾ ವಿರುದ್ಧದ ಸಮರದಲ್ಲಿ ಭಾರತಕ್ಕೆ ಬೆಂಬಲ ಘೋಷಿಸಿದವು.


ಈ ದಾಳಿ ನಡೆದ ಬಳಿಕ ಭಯೋತ್ಪಾದನೆಗೆ ಹೆಸರಾದ ಜೈಷ್ ಎ ಮೊಹಮ್ಮದ್ ಸಂಸ್ಥೆ ಒಂದು ವೀಡಿಯೋ ಬಿಡುಗಡೆಗೊಳಿಸಿ, ಈ ದಾಳಿಯ ಹಿಂದೆ ನಮ್ಮ ಕೈವಾಡವಿದೆ ಎಂದು ಹೇಳಿತು. 22 ವರ್ಷ ವಯಸ್ಸಿನ ಆದಿಲ್ ಅಹ್ಮದ್ ದಾರ್ ಎಂಬ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಚಲಾಯಿಸಿ, ಪುಲ್ವಾಮಾ ಜಿಲ್ಲೆಯ ಲೆತ್ಪೋರಾದಲ್ಲಿ ಸಿಆರ್‌ಪಿಎಫ್ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನಗಳ ಗುಂಪಿಗೆ ಡಿಕ್ಕಿ ಹೊಡೆದು, ಸ್ಫೋಟಿಸಿದ. ಆತ ಒಬ್ಬ ಕಾಶ್ಮೀರದ ಸ್ಥಳೀಯ ಯುವಕನಾಗಿದ್ದು, 2018ರಿಂದ ನಾಪತ್ತೆಯಾಗಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದರು.


ಬಾಲಾಕೋಟ್ ವಾಯು ದಾಳಿ:
ಫೆಬ್ರವರಿ 26, 2019ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಪ್ರಾಂತ್ಯದಲ್ಲಿರುವ ಉಗ್ರಗಾಮಿ ನೆಲೆಗಳ ಮೇಲೆ ದಾಳಿ ನಡೆಸಿತು. ಇದರ ಪರಿಣಾಮವಾಗಿ ಭಾರತ ಪಾಕಿಸ್ತಾನಗಳ ಮಧ್ಯದ ಉದ್ವಿಗ್ನತೆಯೂ ಹೆಚ್ಚಿತು. ವಾಯುಪಡೆಯ ಮಾಹಿತಿಯ ಪ್ರಕಾರ, ಹಲವಾರು ಭಯೋತ್ಪಾದಕರು ಸಾವಿಗೀಡಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವೂ ವಾಯು ದಾಳಿ ನಡೆಸಲು ಪ್ರಯತ್ನಿಸಿತು. ಭಾರತೀಯ ವಾಯು ಸೇನಾ ಪೈಲಟ್ ಅಭಿನಂದನ್ ವರ್ತಮಾನ್ ಅವರು ತಾನಿದ್ದ ಮಿಗ್-21 ಯುದ್ಧ ವಿಮಾನದಿಂದ ಪಾಕಿಸ್ತಾನಿ ವಾಯುಪಡೆಯ ಎಫ್- 16 ವಿಮಾನವನ್ನು ಹೊಡೆದುರುಳಿಸಿದರು. ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದ ಪ್ರದೇಶದಲ್ಲಿ ಭೂಸ್ಪರ್ಶ ಮಾಡಿದರು. ಈ ದಾಳಿಯಲ್ಲಿ ಅವರ ವಿಮಾನ ಘಾಸಿಗೊಂಡ ಬಳಿಕ ಪಾಕಿಸ್ತಾನಿ ಸೈನಿಕರು ಅವರನ್ನು ವಶಪಡಿಸಿಕೊಂಡರು.


ಅವರನ್ನು ಬಳಿಕ ಮಾರ್ಚ್ 1, 2019ರಂದು ಬಿಡುಗಡೆಗೊಳಿಸಲಾಯಿತು. ಅವರಿಗೆ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.


ಪುಲ್ವಾಮಾ ದಾಳಿಯನ್ನು ಖಂಡಿಸಲು, ವಿರೋಧಿಸಲು ದೇಶಾದ್ಯಂತ ಮೆರವಣಿಗೆಗಳು, ಮೋಂಬತ್ತಿ ಪ್ರತಿಭಟನೆಗಳು ನಡೆದವು. ಅಂದಿನಿಂದ ಪ್ರತಿ ವರ್ಷವೂ ಫೆಬ್ರವರಿ 14ರಂದು ಭಾರತ ಪುಲ್ವಾಮಾ ದಾಳಿಯಲ್ಲಿ ಮೃತರಾದ ಯೋಧರನ್ನು ಸ್ಮರಿಸುತ್ತದೆ. ಈ ಘಟನೆ ಭಾರತದ ಇತಿಹಾಸದಲ್ಲಿ ಅಚ್ಚೊತ್ತಿದ ಘಟನೆಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.