ISRO Achievements In 2023 : ಆಗಸ್ಟ್ 23ರಂದು, ಭಾರತದ ಮಹತ್ವದ ಚಂದ್ರಯಾನ-3 ಯೋಜನೆ ಇಲ್ಲಿಯತನಕ ಯಾರೂ ಸ್ಪರ್ಶಿಸಲು ಸಾಧ್ಯವಾಗಿರದ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸುತ್ತಿದ್ದಂತೆ ದೇಶಾದ್ಯಂತ ಸಂಭ್ರಮಾಚರಣೆಗಳು ನಡೆದಿದ್ದವು. ಈ ಸಾಧನೆ ಭಾರತವನ್ನು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ರಾಷ್ಟ್ರಗಳ ಗುಂಪಿಗೆ ಸೇರಿಸಿತು. ಈ ಮೊದಲು ಕೇವಲ ಅಮೆರಿಕಾ, ಸೋವಿಯತ್ ಒಕ್ಕೂಟ, ಮತ್ತು ಚೀನಾ ಮಾತ್ರವೇ ಈ ಸಾಧನೆ ಮಾಡಿದ್ದವು.


COMMERCIAL BREAK
SCROLL TO CONTINUE READING

ಈ ವರ್ಷಾದ್ಯಂತ ಇಸ್ರೋ ಬಾಹ್ಯಾಕಾಶ ಅನ್ವೇಷಣೆಯಲ್ಲಿ ತನ್ನ ವಿಕ್ರಮಗಳನ್ನು ಮೆರೆಯುತ್ತಾ ಸಾಗಿತ್ತು. ಭಾರತ ಸೂರ್ಯನ ವೀಕ್ಷಣೆಗೆ ಒಂದು ಉಪಗ್ರಹವನ್ನು ಉಡಾವಣೆಗೊಳಿಸಿತು. 2025ರಲ್ಲಿ ನಡೆಸಲು ಉದ್ದೇಶಿಸಿರುವ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಅಂಗವಾಗಿ ಪರೀಕ್ಷಾ ಹಾರಾಟವನ್ನು ಕೈಗೊಂಡಿತು.


ಈ ವರ್ಷ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ, ಬಾಹ್ಯಾಕಾಶ ಅನ್ವೇಷಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಧನೆಗಳು ಜಗತ್ತಿನ ಗಮನ ಸೆಳೆದಿದ್ದವು.


ಚಂದ್ರನ ಮೇಲೆ ಭಾರತ


ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಂಡದಲ್ಲಿದ್ದ ವಿಜ್ಞಾನಿಗಳ ಪಾಲಿಗೆ, ಚಂದ್ರನ ಮೇಲ್ಮೈಗೆ ಪ್ರಗ್ಯಾನ್ ರೋವರ್ ಅನ್ನು ಹೊಂದಿದ್ದ ವಿಕ್ರಮ್ ಲ್ಯಾಂಡರ್ ಇಳಿಯುವ ಪ್ರಕ್ರಿಯೆ "20 ನಿಮಿಷಗಳ ಭಯ, ಆತಂಕ" ವಾಗಿತ್ತು. ಸಾಕಷ್ಟು ಉಬ್ಬು ತಗ್ಗುಗಳನ್ನು ಹೊಂದಿರುವ, ಕುಳಿಗಳು, ದಿಬ್ಬಗಳಿಂದ ಆವೃತವಾಗಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಪ್ರತಿ ಸೆಕೆಂಡಿಗೆ 1.68 ಕಿಲೋಮೀಟರ್‌ನಷ್ಟಿದ್ದ ಲ್ಯಾಂಡರ್‌ನ ವೇಗವನ್ನು ಬಹುತೇಕ ನಿಲುಗಡೆಗೆ ತರಬೇಕಾಗಿತ್ತು.


ಇದನ್ನೂ ಓದಿ:  ಉಡಾವಣೆಗೆ ಸಿದ್ಧವಾದ ಎಕ್ಸ್‌ಪೋಸ್ಯಾಟ್: ಕ್ಷ ಕಿರಣಗಳ ಅಧ್ಯಯನದಿಂದ ಬ್ರಹ್ಮಾಂಡದ ರಹಸ್ಯ ಅನಾವರಣ 


ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ಸಂತಸದಿಂದ, ಹೆಮ್ಮೆಯಿಂದ, "ಭಾರತ ಚಂದ್ರನ ಮೇಲೆ ಇಳಿದಿದೆ" ಎಂದು ಘೋಷಿಸಿದರು. ಅದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣವಾಗಿತ್ತು.


ಅದಾದ ಬಳಿಕ, ಮುಂದಿನ ಹತ್ತು ದಿನಗಳ ಕಾಲ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಭಾರತೀಯ ನಾಗರಿಕರು ಲ್ಯಾಂಡರ್ ಮತ್ತು ರೋವರ್‌ಗಳ ಪ್ರತಿಯೊಂದು ಚಲನೆಯನ್ನೂ ಸೂಕ್ಷ್ಮವಾಗಿ ಗಮನಿಸಿದರು. ವಿಜ್ಞಾನಿಗಳು ಭೂಮಿಗೆ ಕಳುಹಿಸಲ್ಪಟ್ಟ ಮಾಹಿತಿಗಳು ಮತ್ತು ಚಿತ್ರಗಳನ್ನು ಕೂಲಂಕಷವಾಗಿ ಗಮನಿಸಿ, ಚಂದ್ರನ ಮೇಲ್ಮೈಗೆ ಸಂಬಂಧಿಸಿದಂತೆ ಮಹತ್ವದ ವಿವರಗಳನ್ನು ವಿಶ್ಲೇಷಿಸಿದರು.


ಆರು ಚಕ್ರಗಳನ್ನು ಹೊಂದಿದ್ದ ರೋವರ್ ವಿಕ್ರಮ್ ಲ್ಯಾಂಡರ್‌ನಿಂದ ಹೊರಬಂದ ತಕ್ಷಣವೇ ಛಾಯಾಚಿತ್ರವನ್ನು ತೆಗೆದು, ಬಳಿಕ ಚಂದ್ರನ ಮೇಲ್ಮೈಯಲ್ಲಿ ತನ್ನ ಸಂಚಾರವನ್ನು ಆರಂಭಿಸಿತು. ಚಂದ್ರನ ಮೇಲೆ ಅತ್ಯಂತ ಜಾಗರೂಕವಾಗಿ ಪ್ರತಿ ಸೆಕೆಂಡಿಗೆ 1 ಸೆಂಟಿಮೀಟರ್ ವೇಗದಲ್ಲಿ ಚಲಿಸಿದ ರೋವರ್, ಒಟ್ಟಾರೆಯಾಗಿ 100 ಮೀಟರ್ (328 ಅಡಿ) ವ್ಯಾಪ್ತಿಯನ್ನು ಸಂಚರಿಸಿತು. ಈ ಸಂದರ್ಭದಲ್ಲಿ ಅದು ಚಂದ್ರನ ಮೇಲ್ಮೈ ಕುಳಿಗಳನ್ನು ತಪ್ಪಿಸಿ, ಜಾಗರೂಕವಾಗಿ ಮುಂದುವರಿಯಿತು.


ರೋವರ್ ಕೈಗೊಂಡ ಅನ್ವೇಷಣೆಗಳು, ಅದರಲ್ಲೂ ಚಂದ್ರನ ಮೇಲ್ಮೈ ಮತ್ತು ನೆಲದೊಳಗಿನ ತಾಪಮಾನದಲ್ಲಿನ ಗಮನಾರ್ಹ ಬದಲಾವಣೆಗಳು, ಚಂದ್ರನಲ್ಲಿ ವಿವಿಧ ರಾಸಾಯನಿಕಗಳು, ಚಂದ್ರನ ಮಣ್ಣಿನಲ್ಲಿ ಗಂಧಕ, ಇತ್ಯಾದಿ ಸಂಶೋಧನೆಗಳು ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಮುದಾಯಕ್ಕೆ ಹೆಚ್ಚಿನ ಉತ್ಸಾಹ ನೀಡಿತು.


ಇಸ್ರೋ ಈ ಯೋಜನೆಯ ಕುರಿತು ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದು, ಚಂದ್ರಯಾನ-3 ತನ್ನ ಗುರಿಗಳನ್ನು ಸಾಧಿಸಿದ್ದು ಮಾತ್ರವಲ್ಲದೆ, ನಿರೀಕ್ಷೆಗಳನ್ನೂ ಮೀರಿ ಸಾಧನೆ ನಿರ್ಮಿಸಿದೆ ಎಂದಿದೆ.


ಆದಿತ್ಯ ಎಲ್1: ಸೂರ್ಯ ಅನ್ವೇಷಣೆಗೆ ಭಾರತದ ಪ್ರಥಮ ಪ್ರಯತ್ನ


ಏಳು ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಈ ಆರ್ಬಿಟರ್, ಸೂರ್ಯನ ವಿವಿಧ ಪದರಗಳನ್ನು ಅನ್ವೇಷಿಸುವ ಗುರಿ ಹೊಂದಿದೆ. ಇದರಲ್ಲಿ ಸೂರ್ಯನ ಅತ್ಯಂತ ಹೊರಪದರವಾದ ಕೊರೊನಾ, ಭೂಮಿಯಿಂದ ನೋಡುವಾಗ ಕಾಣಿಸುವ ಸೂರ್ಯನ ದೃಗ್ಗೋಚರ ಪದರವಾದ ಫೋಟೋಸ್ಫಿಯರ್, ಫೋಟೋಸ್ಫಿಯರ್ ಮತ್ತು ಕೊರೊನಾಗಳ ಮಧ್ಯ ಇರುವ ಪ್ಲಾಸ್ಮಾದ ಪದರವಾದ ಕ್ರೋಮೋಸ್ಫಿಯರ್‌ಗಳ ಅಧ್ಯಯನವೂ ಸೇರಿದೆ.


ಇಸ್ರೋದ ಪ್ರಕಾರ, ಈ ಅನ್ವೇಷಣೆಗಳು ಸೌರ ಮಾರುತಗಳು ಮತ್ತು ಸೌರ ಜ್ವಾಲೆಗಳಂತಹ ಪ್ರಕ್ರಿಯೆಗಳು, ಭೂಮಿ ಮತ್ತು ಬಾಹ್ಯಾಕಾಶ ವಾತಾವರಣದ ಮೇಲೆ ಅವುಗಳ ಪರಿಣಾಮಗಳ ಕುರಿತು ವಾಸ್ತವ ಮಾಹಿತಿ ನೀಡಿ, ಅವುಗಳ ಕುರಿತ ನಮ್ಮ ಜ್ಞಾನವನ್ನು ಹೆಚ್ಚಿಸಲಿವೆ.


ಇದನ್ನೂ ಓದಿ: ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ?


ಇಸ್ರೋ ಈಗಾಗಲೇ ಆರ್ಬಿಟರ್ ಕಲೆ ಹಾಕಿರುವ ಮಾಹಿತಿಗಳನ್ನು ಹಂಚಿಕೊಳ್ಳಲು ಆರಂಭಿಸಿದೆ. ಅದರೊಡನೆ, ಆರ್ಬಿಟರ್ ಕಲೆಹಾಕಿರುವ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಈ ಮೊದಲು ಟ್ವಿಟರ್) ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.


ಬಾಹ್ಯಾಕಾಶ ಯಾತ್ರೆಗೆ ಭಾರತದ ಸಿದ್ಧತೆ


ಅಕ್ಟೋಬರ್ 21ರಂದು ಗಗನಯಾನ ಬಾಹ್ಯಾಕಾಶ ನೌಕೆಯ ಉಡಾವಣೆ ನೆರವೇರುವುದರೊಂದಿಗೆ, ಇಸ್ರೋದ ಪ್ರಮುಖ ಗುರಿಯಾಗಿರುವ, 2025ರಲ್ಲಿ ಮಾನವ ಸಹಿತ ಗಗನಯಾತ್ರೆ ನಡೆಸುವ ಯೋಜನೆಯ ಹಂತಗಳು ಆರಂಭಗೊಂಡವು.


ಭಾರತ ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್ - ಎಲ್ಇಒ) ಮೂವರು ಗಗನಯಾತ್ರಿಗಳನ್ನು ಕಳುಹಿಸುವ ಗುರಿ ಹೊಂದಿದೆ. ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ಪ್ರಸ್ತುತ ಗಗನಯಾನ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.


ಅವರು ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವುದು ಇಸ್ರೋದ ಮುಂದಿನ ಮಹತ್ವದ ಯೋಜನೆಯಾಗಿದೆ ಎಂದು ವಿವರಿಸಿದರು.


ಅಕ್ಟೋಬರ್ ತಿಂಗಳಲ್ಲಿ ನಡೆದ ಹಾರಾಟ ಪರೀಕ್ಷೆ ರಾಕೆಟ್‌ನಲ್ಲಿ ಏನಾದರೂ ಸಮಸ್ಯೆಗಳು ಉಂಟಾದರೆ, ಸಿಬ್ಬಂದಿಗಳು ಸುರಕ್ಷಿತವಾಗಿ ಹೊರಬರಲು ನೆರವಾಗುವ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಅನ್ನು ಪರೀಕ್ಷಿಸುವ ಗುರಿ ಹೊಂದಿತ್ತು.


ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ನಿತ್ಯಕರ್ಮ: ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಹಿಂದಿನ ಮರ್ಮ 


ಬಹುತೇಕ 12 ಕಿಲೋಮೀಟರ್‌ಗಳಷ್ಟು ಮೇಲೆ ಸಾಗಿದ ಬಳಿಕ, ರಾಕೆಟ್‌ನ ತುರ್ತು ಸ್ಥಗಿತ ಪ್ರಕ್ರಿಯೆ (ಎಮರ್ಜೆನ್ಸಿ ಅಬಾರ್ಟ್ ಮೆಕಾನಿಸಂ) ಆರಂಭಗೊಂಡಿತು. ಇದು ಹಲವು ಪ್ಯಾರಾಶೂಟ್‌ಗಳನ್ನು ನಿಯೋಜಿಸಿ, ಕ್ರ್ಯೂ ಎಸ್ಕೇಪ್ ಮಾಡ್ಯುಲ್ ಅನ್ನು ಬಂಗಾಳ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಿತು. ಅಲ್ಲಿ ಭಾರತೀಯ ನೌಕಾಪಡೆಯ ಮುಳುಗು ತಜ್ಞರು ಅದನ್ನು ಸುರಕ್ಷಿತವಾಗಿ ಹೊರತಂದರು.


ಈ ಪರೀಕ್ಷೆಯ ಯಶಸ್ಸಿನ ಬಳಿಕ, ಇಸ್ರೋ ಮೊದಲು ಮಾನವರನ್ನೇ ಹೋಲುವ ರೋಬಾಟ್ ಆಗಿರುವ, ಮಹಿಳಾ ಹ್ಯುಮನಾಯಿಡ್ ಅನ್ನು ಮಾನವ ರಹಿತ ಗಗನಯಾನದಲ್ಲಿ ಕಳುಹಿಸುವ ಯೋಜನೆಯನ್ನು ಘೋಷಿಸಿತು. ಈ ಹೆಜ್ಜೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಮಹತ್ವದ ಗುರಿಯೆಡೆಗೆ ಕರೆದೊಯ್ಯಲಿದೆ.


ಲೇಖಕರು : ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.