ಬಾಹ್ಯಾಕಾಶದಲ್ಲಿ ನಿತ್ಯಕರ್ಮ: ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಹಿಂದಿನ ಮರ್ಮ

1961ರಲ್ಲಿ, ಅಲನ್ ಶೆಪರ್ಡ್ ಎಂಬ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿಯಾಗಿದ್ದರು. ಅವರ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಸಣ್ಣ ಅವಧಿಯದಾಗಿದ್ದರಿಂದ, ಬಾಹ್ಯಾಕಾಶ ನೌಕೆಯಲ್ಲಿ ಅವರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅವರು ರಾಕೆಟ್ ಒಳಗೆ ಪ್ರವೇಶಿಸಿದ ಬಳಿಕ, ರಾಕೆಟ್ ಉಡಾವಣೆ ಮೂರು ಗಂಟೆಗೂ ಹೆಚ್ಚಿನ ವಿಳಂಬ ಎದುರಿಸಿತು. 

Written by - Girish Linganna | Last Updated : Dec 28, 2023, 10:02 AM IST
  • ಮೂತ್ರದಲ್ಲಿ ಬಹುತೇಕ ನೀರಿನ ಅಂಶವೇ ಇರುತ್ತದೆ. ನೀರು ಬಹಳಷ್ಟು ತೂಕ ಹೊಂದಿರುವುದರಿಂದ ಮತ್ತು ಬಹಳಷ್ಟು ಸ್ಥಳವನ್ನು ಆಕ್ರಮಿಸುವುದರಿಂದ, ಭೂಮಿಯಿಂದ ನೀರು ಕೊಂಡೊಯ್ಯುವ ಬದಲು, ಮೂತ್ರವನ್ನು ಶುದ್ಧೀಕರಿಸಿ, ಶುದ್ಧ ನೀರು ಪಡೆಯುವುದು ಸುಲಭ ವಿಧಾನವಾಗಿದೆ.
  • ಗಗನಯಾತ್ರಿಗಳ ಮೂತ್ರವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ, ಕುಡಿಯುವ ನೀರನ್ನಾಗಿಸಲಾಗುತ್ತದೆ.
  • ಹಲವು ಬಾರಿ ಗಗನಯಾತ್ರಿಗಳು ನಾವು ಇಂದು ಕುಡಿಯುತ್ತಿರುವ ಕಾಫಿಯನ್ನು ನಿನ್ನೆ ಕುಡಿದ ಕಾಫಿಯಿಂದ ಮಾಡಲಾಗಿದೆ ಎಂದು ಹಾಸ್ಯ ಮಾಡುವುದಿದೆ.
ಬಾಹ್ಯಾಕಾಶದಲ್ಲಿ ನಿತ್ಯಕರ್ಮ: ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಹಿಂದಿನ ಮರ್ಮ title=

ಒಂದು ಸಾಮಾನ್ಯವಾದ ಶೌಚ ಗುಂಡಿಯಾಗಿರಲಿ, ಅಥವಾ ಚಿನ್ನ ಲೇಪಿಸಿರುವ, ವೈಭವೋಪೇತ ಶೌಚಾಲಯವೇ ಆಗಿರಲಿ, ಭೂಮಿಯಲ್ಲಿರುವ ಗುರುತ್ವಾಕರ್ಷಣೆ ನಮ್ಮ ದೇಹದ ತ್ಯಾಜ್ಯ ಕಶ್ಮಲಗಳು ಹೊರಹೋಗುವಂತೆ ಮಾಡುತ್ತದೆ. ಆದರೆ ಅಂತರಿಕ್ಷದಲ್ಲಿರುವ ಗಗನಯಾತ್ರಿಗಳಿಗೆ ಶೌಚಾಲಯ ಬಳಕೆ ಒಂದು ರೀತಿ ಸವಾಲಾಗಿದೆ. ಬಾಹ್ಯಾಕಾಶದಲ್ಲಿ ಯಾವುದೇ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ, ಯಾವುದೇ ರೀತಿಯ ತೇಲಾಡುವ ತ್ಯಾಜ್ಯಗಳು ಸಮಸ್ಯೆ ಉಂಟುಮಾಡಬಹುದು. ಇವು ಗಗನಯಾತ್ರಿಗಳ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಜೊತೆಗೆ, ಬಾಹ್ಯಾಕಾಶ ಕೇಂದ್ರದಲ್ಲಿರುವ ಯಂತ್ರಗಳಿಗೂ ತೊಂದರೆ ಉಂಟುಮಾಡಬಲ್ಲವು.

ಬಾಹ್ಯಾಕಾಶದಲ್ಲಿ ಅಥವಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ, ಶೌಚಾಲಯದ ಬಳಕೆಗೆ ವಿಶೇಷ ಎಚ್ಚರಿಕೆ ಮತ್ತು ಹೀರಿಕೊಳ್ಳುವ ವ್ಯವಸ್ಥೆಯ ಅವಶ್ಯಕತೆಯಿದೆ.

1961ರಲ್ಲಿ, ಅಲನ್ ಶೆಪರ್ಡ್ ಎಂಬ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿಯಾಗಿದ್ದರು. ಅವರ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಸಣ್ಣ ಅವಧಿಯದಾಗಿದ್ದರಿಂದ, ಬಾಹ್ಯಾಕಾಶ ನೌಕೆಯಲ್ಲಿ ಅವರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅವರು ರಾಕೆಟ್ ಒಳಗೆ ಪ್ರವೇಶಿಸಿದ ಬಳಿಕ, ರಾಕೆಟ್ ಉಡಾವಣೆ ಮೂರು ಗಂಟೆಗೂ ಹೆಚ್ಚಿನ ವಿಳಂಬ ಎದುರಿಸಿತು. ಶೆಪರ್ಡ್ ಅವರಿಗೆ ಮೂತ್ರ ವಿಸರ್ಜಿಸುವ ಅವಶ್ಯಕತೆ ಉಂಟಾಗಿ, ರಾಕೆಟ್‌ನಿಂದ ಹೊರಬರಲು ಅನುಮತಿ ಕೋರಿದರು. ಆದರೆ ಉಡಾವಣೆಯಲ್ಲಿ ಇನ್ನಷ್ಟು ವಿಳಂಬ ಉಂಟಾಗುವುದನ್ನು ತಪ್ಪಿಸಲು, ಯೋಜ‌ನಾ ನಿಯಂತ್ರಣ ಕೇಂದ್ರ ಶೆಪರ್ಡ್ ಅವರಿಗೆ ಧರಿಸಿಕೊಂಡಿದ್ದ ಸ್ಪೇಸ್ ಸೂಟ್‌ನಲ್ಲೇ ಮೂತ್ರ ವಿಸರ್ಜಿಸುವಂತೆ ಸೂಚಿಸಿದರು. ಅದರಂತೆ, ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿ ಒದ್ದೆಯಾಗಿದ್ದ ಒಳ ಉಡುಪಿನೊಡನೆ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದರು!

ಇದನ್ನೂ ಓದಿ- ಉಡಾವಣೆಗೆ ಸಿದ್ಧವಾದ ಎಕ್ಸ್‌ಪೋಸ್ಯಾಟ್: ಕ್ಷ ಕಿರಣಗಳ ಅಧ್ಯಯನದಿಂದ ಬ್ರಹ್ಮಾಂಡದ ರಹಸ್ಯ ಅನಾವರಣ

ಅದೃಷ್ಟವಶಾತ್ ಈಗ ಬಾಹ್ಯಾಕಾಶ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆಯಿದೆ. 2000ನೇ ಇಸವಿಯಲ್ಲಿ ನಿರ್ಮಿಸಲಾದ ಮೊದಲ ಶೌಚಾಲಯ ಪುರುಷರ ಬಳಕೆಗೆ ಪೂರಕವಾಗಿತ್ತಾದರೂ, ಮಹಿಳೆಯರ ಬಳಕೆಗೆ ಕಷ್ಟಕರವಾಗಿತ್ತು. ಈ ಶೌಚಾಲಯದಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ನಡೆಸಬೇಕಾಗಿತ್ತು. ಮಲ ವಿಸರ್ಜನೆಗೆ ಗಗನಯಾತ್ರಿಗಳು ತಮ್ಮ ತೊಡೆಗಳಿಗೆ ಪಟ್ಟಿಗಳನ್ನು ಬಿಗಿದುಕೊಂಡು, ಅವರ ಪೃಷ್ಠದ ಭಾಗ ಸಣ್ಣದಾದ ಶೌಚಾಲಯದ ಆಸನದಲ್ಲಿ ಸರಿಯಾಗಿ ಕುಳಿತಿದೆ ಎಂದು ಖಚಿತಪಡಿಸಿಕೊಳ್ಳಬೇಕಾಗಿತ್ತು. ಇದು ಬಹಳ ಕಷ್ಟಕರವಾಗಿತ್ತು. ಈ ಶೌಚಾಲಯವೂ ಬಳಕೆಗೆ ಸೂಕ್ತವಾಗಿರಲಿಲ್ಲ ಮತ್ತು ಇದನ್ನು ಸ್ವಚ್ಛಗೊಳಿಸುವುದೂ ಕಷ್ಟವಾಗುತ್ತಿತ್ತು.

2018ರಲ್ಲಿ, ನಾಸಾ ಸಂಸ್ಥೆ 23 ಮಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳಿಗೆ ಉತ್ತಮ ಶೌಚಾಲಯ ವ್ಯವಸ್ಥೆ ನಿರ್ಮಿಸಿತು. ಈ ನೂತನ ಶೌಚಾಲಯ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಸವಾಲುಗಳನ್ನು ನಿವಾರಿಸಲು ನಿರ್ವಾತವನ್ನು ಬಳಸಿಕೊಳ್ಳುತ್ತದೆ. ಈ ಶೌಚಾಲಯದಲ್ಲಿ ಎರಡು ಭಾಗಗಳಿವೆ. ಒಂದು ಫನೆಲ್ ಹೊಂದಿರುವ ಕೊಳವೆ ಮೂತ್ರ ವಿಸರ್ಜನೆಗೆ ಬಳಕೆಯಾದರೆ, ಒಂದು ಸಣ್ಣದಾದ, ಎತ್ತರಿಸಿದ ಆಸನ ಮಲ ವಿಸರ್ಜನೆಗೆ ಬಳಕೆಯಾಗುತ್ತದೆ.

ಬಾಹ್ಯಾಕಾಶ ಶೌಚಾಲಯವನ್ನು ಬಳಸುವಾಗ ಗಗನಯಾತ್ರಿಗಳು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲಿ ಹೋಗದ ರೀತಿಯಲ್ಲಿ ಹಿಡಿದುಕೊಳ್ಳಲು ಬಹಳಷ್ಟು ಸ್ಥಳಗಳಿವೆ. ಗಗನಯಾತ್ರಿಗಳು ಈ ಶೌಚಾಲಯದಲ್ಲಿ ನಿಂತು ಅಥವಾ ಕುಳಿತು ಮೂತ್ರ ವಿಸರ್ಜನೆ ನಡೆಸಬಹುದು. ಆದರೆ ಅವರು ನಳಿಕೆ ಮತ್ತು ಕೊಳವೆಯನ್ನು ಜಾಗರೂಕವಾಗಿ ಅವರ ಚರ್ಮಕ್ಕೆ ಒತ್ತಿ ಹಿಡಿದು, ಅಲ್ಲೆಲ್ಲೂ ಸೋರಿಕೆಯಾಗದಂತೆ ತಡೆಯಬೇಕಾಗುತ್ತದೆ.

ಇದನ್ನೂ ಓದಿ- ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ?

ಮಲ ವಿಸರ್ಜನೆ ನಡೆಸಲು ಗಗನಯಾತ್ರಿಗಳು ಭೂಮಿಯಲ್ಲಿರುವ ಶೌಚಾಲಯಗಳ ರೀತಿಯಲ್ಲೇ ಶೌಚಾಲಯದ ಆಸನವನ್ನು ಮೇಲೆತ್ತಿ ಕುಳಿತುಕೊಳ್ಳಬೇಕಾಗುತ್ತದೆ. ಆದರೆ, ಈ ಬಾಹ್ಯಾಕಾಶ ಶೌಚಾಲಯಗಳು ಮುಚ್ಚಳ ತೆರೆಯುತ್ತಿದ್ದ ಹಾಗೇ ಗಾಳಿ ಹೀರಿಕೊಳ್ಳಲು ಆರಂಭಿಸುತ್ತವೆ. ಇದು ಏನೂ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲದಂತೆ ಮತ್ತು ದುರ್ವಾಸನೆ ಹರಡದಂತೆ ಮಾಡುತ್ತದೆ. ಈ ಶೌಚಾಲಯದ ಆಸನಗಳು ಗಗನಯಾತ್ರಿಗಳಿಗೆ ಸರಿಯಾಗಿ ಹೊಂದಿಕೊಳ್ಳಬೇಕೆಂಬ ಕಾರಣಕ್ಕೆ, ಬಾಹ್ಯಾಕಾಶದ ಶೌಚಾಲಯ ಆಸನಗಳು ನಾವು ಮನೆಯಲ್ಲಿ ಬಳಸುವ ಆಸನಗಳಿಗಿಂತ ಸಣ್ಣದಾಗಿರುತ್ತವೆ.

ಮೂತ್ರದಲ್ಲಿ ಬಹುತೇಕ ನೀರಿನ ಅಂಶವೇ ಇರುತ್ತದೆ. ನೀರು ಬಹಳಷ್ಟು ತೂಕ ಹೊಂದಿರುವುದರಿಂದ ಮತ್ತು ಬಹಳಷ್ಟು ಸ್ಥಳವನ್ನು ಆಕ್ರಮಿಸುವುದರಿಂದ, ಭೂಮಿಯಿಂದ ನೀರು ಕೊಂಡೊಯ್ಯುವ ಬದಲು, ಮೂತ್ರವನ್ನು ಶುದ್ಧೀಕರಿಸಿ, ಶುದ್ಧ ನೀರು ಪಡೆಯುವುದು ಸುಲಭ ವಿಧಾನವಾಗಿದೆ. ಗಗನಯಾತ್ರಿಗಳ ಮೂತ್ರವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ, ಕುಡಿಯುವ ನೀರನ್ನಾಗಿಸಲಾಗುತ್ತದೆ. ಹಲವು ಬಾರಿ ಗಗನಯಾತ್ರಿಗಳು ನಾವು ಇಂದು ಕುಡಿಯುತ್ತಿರುವ ಕಾಫಿಯನ್ನು ನಿನ್ನೆ ಕುಡಿದ ಕಾಫಿಯಿಂದ ಮಾಡಲಾಗಿದೆ ಎಂದು ಹಾಸ್ಯ ಮಾಡುವುದಿದೆ.

ಕೆಲವೊಂದು ಬಾರಿ ವಿಜ್ಞಾನಿಗಳು ಗಗನಯಾತ್ರಿಗಳ ಮಲವನ್ನು ಅಧ್ಯಯನದ ಉದ್ದೇಶಕ್ಕಾಗಿ ಭೂಮಿಗೆ ತರುವುದಿದೆ. ಆದರೆ, ಸಾಮಾನ್ಯವಾಗಿ, ಮಲ ವಿಸರ್ಜನೆಯಂತಹ ಶೌಚ ತ್ಯಾಜ್ಯಗಳನ್ನು ದಹಿಸಲಾಗುತ್ತದೆ. ಗಗನಯಾತ್ರಿಗಳ ಮಲವನ್ನು ತ್ಯಾಜ್ಯ ಚೀಲಕ್ಕೆ ರವಾನಿಸಿ, ಅದನ್ನು ಗಾಳಿಯಾಡದ ಸಂಗ್ರಾಹಕಗಳಲ್ಲಿ ಇಡಲಾಗುತ್ತದೆ. ಇದರಲ್ಲಿ ಸ್ವಚ್ಛಗೊಳಿಸುವ ಉದ್ದೇಶದಿಂದ ಟಾಯ್ಲೆಟ್ ಪೇಪರ್‌ಗಳು, ಟಿಶ್ಯೂಗಳು, ಹಾಗೂ ಕೈಗವಸುಗಳನ್ನೂ ತುಂಬಲಾಗುತ್ತದೆ. ಈ ಸಂಗ್ರಾಹಕಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಬರುವ ಕಾರ್ಗೋ ಶಿಪ್‌ಗಳಿಗೆ ತುಂಬಲಾಗುತ್ತದೆ. ಇವುಗಳನ್ನು ಮರಳಿ ಭೂಮಿಗೆ ಕಳುಹಿಸುವಾಗ, ಭೂಮಿಯ ಮೇಲಿನ ವಾತಾವರಣದಲ್ಲಿ ಉರಿದು ಹೋಗುತ್ತವೆ.

ನೀವು ಆಕಾಶದಲ್ಲಿ ಉಲ್ಕೆಗಳನ್ನು ನೋಡುವಾಗ, ಎಷ್ಟೋ ಬಾರಿ ಅದು ಭೂಮಿಯ ವಾತಾವರಣದಲ್ಲಿ ಉಲ್ಕಾಶಿಲೆ ದಹಿಸುವುದಾಗಿರಬಹುದು ಅಥವಾ ಗಗನಯಾತ್ರಿಗಳ ಮಲ ಮತ್ತು ಇತರ ತ್ಯಾಜ್ಯಗಳು ಉರಿಯುತ್ತಿರುವುದೂ ಆಗಿರಬಹುದು! ಅದರೊಡನೆ, ಮುಂದಿನ ಬಾರಿ ನೀವು ಶೌಚಾಲಯವನ್ನು ಬಳಸುವಾಗ, ಗುರುತ್ವಾಕರ್ಷಣೆಯ ಸಹಾಯವನ್ನು ಸ್ಮರಿಸಲು ಮರೆಯದಿರಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News