ಸರ್ಕಾರ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ; ಚಿದಂಬರಂ
ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿರುವ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸರ್ಕಾರಕ್ಕೆ ನನ್ನ ದನಿ ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿರುವ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ(P Chidambaram) ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸರ್ಕಾರ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾಯಕರನ್ನು ಯಾವುದೇ ಆರೋಪವಿಲ್ಲದೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ ಪಿ. ಚಿದಂಬರಂ, ಮಂತ್ರಿಯಾಗಿ ನನ್ನ ದಾಖಲೆ ಮತ್ತು ನನ್ನ ಆತ್ಮಸಾಕ್ಷಿಯು ಸ್ಪಷ್ಟವಾಗಿದೆ. ನನ್ನೊಂದಿಗೆ ಕೆಲಸ ಮಾಡಿದ್ದ ಅಧಿಕಾರಿಗಳು, ಉದ್ಯಮಿಗಳು ಮತ್ತು ಸಂಪರ್ಕ ಹೊಂದಿರುವ ಪತ್ರಕರ್ತರಿಗೂ ಈ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದವರು ತಿಳಿಸಿದರು.
106 ದಿನಗಳ ನಂತರ ಜೈಲಿನಿಂದ ಬಿಡುಗಡೆಯಾದ ಕ್ಷಣಗಳ ಅನುಭವಗಳನ್ನು ಹಂಚಿಕೊಂಡ ಪಿ ಚಿದಂಬರಂ, ನಾನು ಕಳೆದ ರಾತ್ರಿ ಸುಮಾರು ಎಂಟು ಗಂಟೆಗೆ ಬಿಡುಗಡೆಯಾದಾಗ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ಮೊದಲನೆಯದು ಕಾಶ್ಮೀರ ಕಣಿವೆಯ 75 ಲಕ್ಷ ಜನರು 2019 ರ ಆಗಸ್ಟ್ 4 ರಂದು ಅವರ ಮೂಲ ಹಕ್ಕುಗಳಿಂದ ವಂಚಿತರಾಗಿದರು ಎಂಬುದರ ಬಗೆಗೆ ಎಂದರು.
ಯಾವುದೇ ಆರೋಪವಿಲ್ಲದೆ ಬಂಧನಕ್ಕೊಳಗಾದ ರಾಜಕೀಯ ನಾಯಕರ ಬಗ್ಗೆ ನಾನು ವಿಶೇಷವಾಗಿ ಚಿಂತಿತನಾಗಿದ್ದೇನೆ ಎಂದು ತಿಳಿಸಿದ ಪಿ. ಚಿದಂಬರಂ, ಪ್ರಸ್ತುತ ಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕೆ ಯಾವುದೇ ಮೌಲ್ಯವಿಲ್ಲ. ಆದ್ದರಿಂದ, ನಾವು ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಅವರ ಸ್ವಾತಂತ್ರ್ಯಕ್ಕಾಗಿ ಅವರೇ ಹೋರಾಡಬೇಕಾಗಿದೆ ಎಂದು ತಿಳಿಸಿದರು.
ಇಂದು ಆರ್‌ಬಿಐ ವಿತ್ತೀಯ ನೀತಿ ಪ್ರಕಟಿಸಿದ ನಂತರ ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ವಾಗ್ಧಾಳಿ ನಡೆಸಿದ ಮಾಜಿ ವಿತ್ತ ಸಚಿವ ಚಿದಂಬರಂ, ಆರ್ಥಿಕತೆಯು 8% ರಿಂದ 4.5% ಕ್ಕೆ ಇಳಿದಿದೆ. ನಿಜವಾದ ಜಿಡಿಪಿ ಬೆಳವಣಿಗೆಯ ದರವು 1.5% ಕ್ಕಿಂತ ಕಡಿಮೆಯಿದೆ. ದೇಶದಲ್ಲಿ ಆರ್ಥಿಕ ಹಿಂಜರಿತದಂತಹ ಸಂದರ್ಭ ಎದುರಾಗಿದೆ. ಆದರೆ ಸರ್ಕಾರ ಇದನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ ಎಂದು ಹರಿಹಾಯ್ದರು.
ದೇಶದ ಹದಗೆಡುತ್ತಿರುವ ಆರ್ಥಿಕತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಚಿದಂಬರಂ, ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಬೆಳವಣಿಗೆಯ ದರ ವರ್ಷದ ಕೊನೆಯಲ್ಲಿ 5% ಇದ್ದರೆ ನಾವೇ ಅದೃಷ್ಟವಂತರು ಎನ್ನಬಹುದು ಎಂದರು.
ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಡಾ.ಅರವಿಂದ್ ಸುಬ್ರಮಣ್ಯಂ ಅವರು ಈ ಸರ್ಕಾರವು ಅಂಕಿಅಂಶಗಳನ್ನು ಪ್ರಸ್ತುತಪಡಿಸುವ ವಿಧಾನದ ಪ್ರಕಾರ, ಈ ಬೆಳವಣಿಗೆಯ ದರವು 5% ಅಲ್ಲ 1.5% ಗೆ ಸನಿಹದಲ್ಲಿದೆ ಎಂದು ಈಗಾಗಲೇ ಎಚ್ಚರಿಸಿದ್ದರು. ಈ ವಿಷಯದಲ್ಲಿ ಪ್ರಧಾನಿ ಅಸಾಧಾರಣವಾಗಿ ಮೌನವಾಗಿದ್ದಾರೆ. ಅವರು ಈ ವಿಷಯವನ್ನು ತಮ್ಮ ಮಂತ್ರಿಗಳಿಗೆ ಬಿಟ್ಟಿದ್ದಾರೆ. ಅರ್ಥಶಾಸ್ತ್ರಜ್ಞರ ಪ್ರಕಾರ, ಆರ್ಥಿಕತೆಯನ್ನು ನಿಭಾಯಿಸುವ ದೃಷ್ಟಿಯಿಂದ ಸರ್ಕಾರವು 'ಅಸಮರ್ಥ'ವಾಗಿದೆ ಎಂದು ಸಾಬೀತಾಗಿದೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.