ನವದೆಹಲಿ: ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ಪಾವತಿಯಲ್ಲಿನ ವಂಚನೆ ಕುರಿತು ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಡಿಜಿಟಲ್ ಪಾವತಿಗಳಲ್ಲಿ ನಡೆಯುತ್ತಿರುವ ಮೋಸದ ಘಟನೆಗಳು ದೇಶಾದ್ಯಂತ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಡಿಜಿಟಲ್ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಈ ಕುರಿತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ  ಗೃಹ ಸಚಿವರಿಗೆ ಸೂಚನೆ ನೀಡಿದರು.


COMMERCIAL BREAK
SCROLL TO CONTINUE READING

ಲೋಕಸಭೆ  ಶೂನ್ಯ ವೇಳೆಯಲ್ಲಿಂದು ಹರಿಯಾಣದ ರೋಹ್ಟಕ್‌ನ ಬಿಜೆಪಿ ಸಂಸದ ಅರವಿಂದ್ ಶರ್ಮಾ ಅವರು ಆ್ಯಪ್‌ಗಳ ಮೂಲಕ ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾವತಿ ಪ್ರಕರಣಗಳಲ್ಲಿನ ವಂಚನೆ ವಿಷಯವನ್ನು ಪ್ರಸ್ತಾಪಿಸಿದರು. ಪೇಟಿಎಂ(Paytm), ಗೂಗಲ್ ಪೇ(Google Pay), ಫೋನ್ ಪೇ(Phone Pay) ಮುಂತಾದ ಆ್ಯಪ್‌ಗಳ ಮೂಲಕ ಜನರು ಮೋಸ ಹೋಗುತ್ತಿರುವ ಘಟನೆಗಳು ದೇಶಾದ್ಯಂತ ಕೇಳಿಬರುತ್ತಿವೆ. ಅನೇಕ ಜನರು ಪ್ರತಿದಿನ ಈ ರೀತಿಯ ವಂಚನೆಗೆ ಬಲಿಯಾಗುತ್ತಿದ್ದಾರೆ. ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ, ಅಂತಹ ಸಂದರ್ಭಗಳಲ್ಲಿ ಎಫ್ಐಆರ್ ದಾಖಲಿಸಲು ಪೊಲೀಸರು ಸಹ ಹಿಂದೆ ಮುಂದೆ ನೋಡುತ್ತಾರೆ ಎಂದು ಅರವಿಂದ ಶರ್ಮಾ ಸದನದ ಗಮನ ಸೆಳೆದರು.


ಇತ್ತೀಚಿಗಿನ ಘಟನೆಯೊಂದನ್ನು ಉಲ್ಲೇಖಿಸಿರುವ ಅರವಿಂದ್ ಶರ್ಮಾ, ಎರಡು ದಿನಗಳ ಹಿಂದೆ ಹರಿಯಾಣದಲ್ಲಿ ಮಹಿಳೆ ಹೇಗೆ ಮೋಸ ಹೋಗಿದ್ದಾರೆ ಎಂಬುದನ್ನು ಸ್ಪೀಕರ್‌ಗೆ ವಿವರಿಸಿದರು. ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಲು ಹೋದಾಗ, 'ನಾವು ಏನನ್ನೂ ಮಾಡಲು ಸಾಧ್ಯವಿಲ್ಲ, ಆ ಸಂಖ್ಯೆಯನ್ನು ನಿರ್ಬಂಧಿಸಿ' ಎಂದು ಪೊಲೀಸರು ಆಕೆಗೆ ಸಲಹೆ ನೀಡಿದ್ದಾರೆ. ಹೆಚ್ಚಿನ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಪೊಲೀಸರ ವರ್ತನೆ ಹೀಗೆಯೇ ಇರುತ್ತದೆ ಎಂದು ಶರ್ಮಾ ಬೇಸರ ವ್ಯಕ್ತಪಡಿಸಿದರು.


ಇಂತಹ ಘಟನೆಗಳ ಬಗ್ಗೆ ದಿನದಿಂದ ದಿನಕ್ಕೆ ದೂರುಗಳು ಹೆಚ್ಚಾಗುತ್ತಿರುವ ಬಗ್ಗೆ ಸಹಮತ ಸೂಚಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರಿಗೆ ಈ ವಿಷಯವನ್ನು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು. ಅಲ್ಲದೆ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸುವಂತೆ ರಾಜ್ಯಗಳಿಗೆ ಆದೇಶಿಸಲು ತಿಳಿಸಿದರು.