ನವದೆಹಲಿ: ಕಳೆದ ತಿಂಗಳು ಮುಸ್ಲಿಮರ ಹಜ್​ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮವನ್ನು ಕೈಗೊಂಡಿದ್ದು, ಹಜ್ ಯಾತ್ರೆಗೆ ತಗಲುವ ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಮಾನದ ಟಿಕೆಟ್ ದರಗಳಲ್ಲಿ ಕಡಿತ ಮಾಡುವುದಾಗಿ ಘೋಷಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಚಿವ ಮುಖ್ತಾರ್ ಅಬ್ಬಾಸ್ ತಿಳಿಸಿದ್ದು, ಇದನ್ನು ಮೋದಿ ಸರ್ಕಾರದ ಮಹತ್ವದ ಕ್ರಮ ಎಂದು ಬಣ್ಣಿಸಿದ್ದಾರೆ. "ಈ ವಿಚಾರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯವು ವಿಶೇಷ ಆಸಕ್ತಿ ವಹಿಸಿ ಈ ನಿರ್ಣಯ ಕೈಗೊಂಡಿದ್ದು, ಇದು ‘ಒಲೈಕೆಯಿಲ್ಲದ ಸಬಲೀಕರಣ ನೀತಿ’ಯ ಮುಂದುವರಿದ ಭಾಗವೆಂದು ನಖ್ವಿ ಹೇಳಿದ್ದಾರೆ.


ಮುಂದುವರೆದು ಮಾತನಾಡಿದ ಅವರು, ಹಜ್ ಯಾತ್ರೆಗೆ ತಗಲುವ ವಿಮಾನ ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವ ನಿರ್ಧಾರವು ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಇದ್ದ ಹಾಜಿಗಳ ಆರ್ಥಿಕ ಹಾಗೂ ರಾಜಕೀಯ ಶೋಷಣೆಗೆ ಅಂತ್ಯಹಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. 


ಅಲ್ಲದೆ, ಹಿಂದಿನ ಯುಪಿಎ ಆಡಳಿತದಲ್ಲಿದ್ದ ವಿಮಾನ ದರವನ್ನು ಮತ್ತು 2018ರಲ್ಲಿರುವ ದರಕ್ಕೆ ಹೋಲಿಸಿದ ನಖ್ವಿ ಅವರು, 2013-2014ರ ಅವಧಿಯಲ್ಲಿ ಅಹಮದಾಬಾದ್ನಿಂದ ರೂ 98,750 ರೂ. ಇತ್ತು. ಆದರೆ ಈ ವರ್ಷ 65,015 ರೂ.ಗೆ ಇಳಿಸಲಾಗಿದೆ. ಅಂತೆಯೇ 2013-14ನೇ ಸಾಲಿನಲ್ಲಿ ಮುಂಬೈನಿಂದ 98,750ರೂ. ಇದ್ದ ವಿಮಾನ ಟಿಕೆಟ್ ದರವನ್ನು ಈ ವರ್ಷ 57,857 ರೂ.ಗೆ ಇಳಿಸಲಾಗಿದೆ ಎಂದು ವಿವರಿಸಿದರು. 


ದರಕಡಿತದ ನಿರ್ಧಾರವು ಭಾರತದ 21 ಏರ್’ಪೋರ್ಟ್’ಗಳಿಂದ ಸೌದಿಯ ಜೆದ್ದಾ ಮತ್ತು ಮದೀನಾಗೆ ತೆರಳುವ ಏರ್ ಇಂಡಿಯಾ, ಸೌದಿ ಏರ್’ಲೈಬ್ಸ್ ಮತ್ತು ಫ್ಲೈನಾಸ್ ಸೇರಿದಂತೆ ಎಲ್ಲಾ  ಸಂಸ್ಥೆಗಳಿಗೆ ಅನ್ವಯವಾಗಲಿದೆ.


2012 ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಹಜ್ ಯಾತ್ರೆಗೆ ನೀಡಿದ ಸಬ್ಸಿಡಿಗಳನ್ನು ಸರ್ಕಾರ ಜನವರಿಯಲ್ಲಿ ರದ್ದುಪಡಿಸುವ ತೀರ್ಮಾನ ಕೈಗೊಂಡಿತ್ತು.


​ಕಳೆದ ತಿಂಗಳು ಮುಸ್ಲಿಮರ ಹಜ್ ಯಾತ್ರೆಗೆ ನೀಡಲಾಗುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸುವ ತೀರ್ಮಾನವನ್ನು ಕೈಗೊಂಡಿತ್ತು. ಅಲ್ಲದೆ, ಹಜ್​ ಸಬ್ಸಿಡಿ ಹಣವನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಬಳಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.