ನವದೆಹಲಿ: ಈ ಮಾನ್ಸೂನ್ ಅವಧಿಯಲ್ಲಿ ಏಳು ರಾಜ್ಯಗಳಲ್ಲಿ ಪ್ರವಾಹ ಸಂಬಂಧಿ ಘಟನೆಗಳಲ್ಲಿ 774 ಜನರು ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯದ ರಾಷ್ಟ್ರೀಯ ತುರ್ತು ಪ್ರತಿಕ್ರಿಯೆ ಕೇಂದ್ರ (NERC) ಪ್ರಕಾರ, ಪ್ರವಾಹ ಮತ್ತು ಮಳೆ ಕಾರಣದಿಂದ ಕೇರಳದಲ್ಲಿ 187, ಉತ್ತರ ಪ್ರದೇಶದ 171, ಪಶ್ಚಿಮ ಬಂಗಾಳದಲ್ಲಿ 170 ಮತ್ತು ಮಹಾರಾಷ್ಟ್ರದಲ್ಲಿ 139 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಗುಜರಾತ್ನಲ್ಲಿ 52 ಜನರು, ಅಸ್ಸಾಂನಲ್ಲಿ 45 ಮತ್ತು ನಾಗಾಲ್ಯಾಂಡ್ನಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳಲ್ಲಿ ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ಕೇರಳದಲ್ಲಿ 22 ಮತ್ತು ಪಶ್ಚಿಮ ಬಂಗಾಳದಲ್ಲಿ 5 ಜನರು ಕಾಣೆಯಾಗಿದ್ದಾರೆ ಎನ್ನಲಾಗಿದೆ. ರಾಜ್ಯಗಳಲ್ಲಿ, ಮಳೆ ಮತ್ತು ಪ್ರವಾಹದ ಕಾರಣಗಳಿಂದಾಗಿ 245 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ 26, ಅಸ್ಸಾಂನ 23, ಪಶ್ಚಿಮ ಬಂಗಾಳ 22, ಕೇರಳ 14, ಉತ್ತರ ಪ್ರದೇಶ 12, ನಾಗಾಲ್ಯಾಂಡ್ 11 ಮತ್ತು ಗುಜರಾತ್ 10 ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ಎನ್ನಲಾಗಿದೆ.


ಅಸ್ಸಾಂನಲ್ಲಿ-15, ಉತ್ತರ ಪ್ರದೇಶ-08, ಪಶ್ಚಿಮ ಬಂಗಾಳದಲ್ಲಿ-08, ಗುಜರಾತ್-07, ಕೇರಳ-04, ಮಹಾರಾಷ್ಟ್ರ-04 ಮತ್ತು ನಾಗಾಲ್ಯಾಂಡ್ನಲ್ಲಿ 01 NDRF ತಂಡಗಳನ್ನು ನಿಯೋಜಿಸಲಾಗಿದೆ. 


ವರುಣನ ಆರ್ಭಟಕ್ಕೆ ಕೇರಳ ತತ್ತರ
ಕೇರಳದಲ್ಲಿ ಪ್ರವಾಹ ಭೀತಿ ಮುಂದುವರೆದಿದೆ. ಆಗಸ್ಟ್ 8 ರ ನಂತರ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇದುವರೆಗೂ 37 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಕೇರಳದ ಪ್ರವಾಹದಿಂದ ರಾಜ್ಯದ 8,316 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟ ಅನುಭವಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ. ಸುಮಾರು 20,000 ಮನೆಗಳು ಸಂಪೂರ್ಣವಾಗಿ ನಾಶಗೊಂಡಿದ್ದು, 10,000 ಕಿಲೋಮೀಟರ್ ರಸ್ತೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಪರಿಶೀಲಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು 100 ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ.