ನವದೆಹಲಿ: ಕೇರಳ ಪ್ರವಾಹದಿಂದ ನೂರಾರು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ವರ್ಷ ಭಾರೀ ಮಳೆ ಕಾರಣದಿಂದ ದೇಶದಾದ್ಯಂತ 1074 ಜನರು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಆಗಸ್ಟ್ 26 ರ ತನಕ ಭಾರಿ ಮಳೆಯ ಕಾರಣದಿಂದಾಗಿ ದೇಶಾದ್ಯಂತ 1074 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ. ಇವುಗಳಲ್ಲಿ ಕೇರಳದಲ್ಲಿ 443 ಮಂದಿ ಮೃತಪಟ್ಟಿದ್ದು, ಕರ್ನಾಟಕದಲ್ಲಿ 166 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ (218), ಪಶ್ಚಿಮ ಬಂಗಾಳ (198) ಮತ್ತು ಅಸ್ಸಾಂ (49) ಮಂದಿ ಮೃತಪಟ್ಟಿದ್ದಾರೆ.


ಪ್ರವಾಹದಿಂದಾಗಿ ವಿವಿಧ ರಾಜ್ಯಗಳಲ್ಲಿ 17,14,863 ಜನರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. 


ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ವಿಶೇಷವಾಗಿ ಕೇರಳದ ವಿವಿಧ ಭಾಗಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಕಾರ್ಯಾಚರಣೆಗಳು ಮತ್ತು ಪುನರ್ನಿರ್ಮಾಣ ಪ್ರಕ್ರಿಯೆಗಳಲ್ಲಿ ನೆರವಾಗಲು ಸಶಸ್ತ್ರ ಪಡೆಗಳನ್ನು ಸಹ ನಿಯೋಜಿಸಲಾಗಿದೆ.


ಭಾನುವಾರ ತನ್ನ ಮಾಸಿಕ ರೇಡಿಯೋ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಕೇರಳದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದರು. ಕೇರಳ ಸೇರಿದಂತೆ ಇತರ ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರದಿಂದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ ಪ್ರಧಾನಿ ಮೋದಿ, NDRF ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ತಂಡಗಳನ್ನು ಶ್ಲಾಘಿಸಿದರು.