ಮನೆಯಲ್ಲಿಯೇ ಕುಳಿತು ಆಧಾರ್ ಮಾಹಿತಿ ನವೀಕರಿಸುವುದು ಹೇಗೆ?
ಭಾರತೀಯ ವಿಶಿಷ್ಠ ಗುರುತು ಚೀಟಿ ಪ್ರಾಧಿಕಾರ ತನ್ನ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಇತ್ತೀಚೆಗಷ್ಟೇ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಪ್ರಾರಂಭಿಸಿದೆ.
ನವದೆಹಲಿ:ಈ ಟ್ವಿಟ್ಟರ್ ಹ್ಯಾಂಡಲ್ ಬಳಸಿ ಆಧಾರ್ ಕಾರ್ಡ್ ಧಾರಕರು ಕಾರ್ಡ್ ನಲ್ಲಿರುವ ತಮ್ಮ ಮಾಹಿತಿ ನವೀಕರಿಸಬಹುದಾಗಿದೆ. ಮಾಹಿತಿಯನ್ನು ನವೀಕರಿಸಲು ಅಥವಾ ಪಡೆಯಲು ಬಯಸುವ ಆಧಾರ್ ಬಳಕೆದಾರರು @Aadhar_Careಗೆ ಟ್ವೀಟ್ ಮಾಡಬಹುದಾಗಿದೆ. ಸದ್ಯ ಈ ಹ್ಯಾಂಡಲ್ ಗೆ ಸುಮಾರು 8000ಕ್ಕೂ ಅಧಿಕ ಜನ ಫಾಲೋವರ್ಸ್ ಗಳಿದ್ದಾರೆ. 'ಇದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಆಧಾರ್(AADHAR) ನ ಅಧಿಕೃತ ಕೇಂದ್ರವಾಗಿದೆ' ಎಂದು ಸಂಸ್ಥೆ ತನ್ನ ವಿವರಣೆಯಲ್ಲಿ ಹೇಳಿಕೊಂಡಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲು ಮತ್ತು ಅವರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಯುಐಎಡಿಎಐ ಈ ಉಪಕ್ರಮ ಆರಂಭಿಸಿದೆ. ಅಷ್ಟೇ ಅಲ್ಲ ಟ್ವಿಟ್ಟರ್ ನಲ್ಲಿ ಖಾತೆ ಹೊಂದಿರದ ನಾಗರಿಕರೂ ಕೂಡ ಕಾಲ್ ಸೆಂಟರ್ ಸಂಖ್ಯೆ 1947ಗೆ ಕರೆ ಮಾಡಿ ತಮ್ಮ ಮಾಹಿತಿ ಪಡೆಯಬಹುದು ಅಥವಾ ನವೀಕರಿಸಬಹುದು. ಇದರ ಜೊತೆಗೆ ನಾಗರಿಕರು help@UIDAI.gov.inಗೆ ಇ-ಮೇಲ್ ಕಳುಹಿಸುವ ಮೂಲಕ ಕೂಡ ಈ ಸೇವೆ ಪಡೆಯಬಹುದು. ಇದರೊಂದಿಗೆ ತಮ್ಮ ಬಳಕೆದಾರರು ಅಥವಾ ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಹೊಂದುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಜ್ಜೆಗುರುತು ಮೂಡಿಸಿರುವ ಪಟ್ಟಿಗೆ ಪ್ರಾಧಿಕಾರ ಸೇರಿಕೊಂಡಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ : ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಪ್ರಾರಂಭಿಸಿರುವ ಈ ಟ್ವಿಟ್ಟರ್ ಹ್ಯಾಂಡಲ್ ಗೆ ಟ್ಯಾಗ್ ಮಾಡಲು ಮೊದಲು ಆಧಾರ್ ಬಳಕೆದಾರರು ತಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬೇಕು. ನಿಮ್ಮ ಪ್ರಶ್ನೆಗಳನ್ನು ಓದಿದ ಬಳಿಕ UIDAI ಪ್ರತಿನಿಧಿಯೊಬ್ಬರು ನಿಮ್ಮ ಸಮಸ್ಯೆಯ ಬಗ್ಗೆ ಹೆಚ್ಚಿನ ವಿವರ ಪಡೆಯಲು ಮತ್ತು ಅದಕ್ಕೆ ಪರಿಹಾರ ಒದಗಿಸಲು ಖಾಸಗಿ ಅಥವಾ ನೇರ ಸಂದೇಶಗಳ ಮೂಲಕ ಸಂಪರ್ಕ ಹೊಂದುತ್ತಾರೆ. ಪ್ರಾಧಿಕಾರ ಆರಂಭಿಸಿರುವ ಈ ಟ್ವಿಟ್ಟರ್ ಹ್ಯಾಂಡಲ್ ಬಳಸಿ ಆಧಾರ್ ಧಾರಕರು ತಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ನವೀಕರಿಸಬಹುದಾಗಿದೆ. ಅಷ್ಟೇ ಅಲ್ಲ ನಿಮ್ಮ ಕಾರ್ಡ್ ನಲ್ಲಿ ನಮೂದಾಗಿರುವ ವಿಳಾಸ, ಹುಟ್ಟಿದ ದಿನಾಂಕ ಮುಂತಾದ ಇತರೆ ಮಾಹಿತಿಗಳನ್ನು ನವೀಕರಿಸಲು ನೀವು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನು ಸಹ ಪಡೆಯಲು ಈ ಹ್ಯಾಂಡಲ್ ಸಹಕಾರಿಯಾಗಲಿದೆ.