ಭೋಪಾಲ್: ಮಧ್ಯಪ್ರದೇಶದ ವಿವಿಧ ಸ್ಥಳಗಳಲ್ಲಿ ಸೋಮವಾರ ಬೆಳಿಗ್ಗೆ ಕೂಡ ಆದಾಯ ತೆರಿಗೆ(ಐಟಿ) ಅಧಿಕಾರಿಗಳಿಂದ ದಾಳಿ ಮುಂದುವರೆದಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಬೆಂಬಲಿಗರಾದ ಪ್ರವೀಣ್ ಕಕ್ಕರ್ ಹಾಗೂ ಸಹಾಯಕ ಅಶ್ವಿನ್ ಶರ್ಮಾ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ.


COMMERCIAL BREAK
SCROLL TO CONTINUE READING

ಐಟಿ ಅಧಿಕಾರಿಗಳು ಅಶ್ವಿನ್ ಶರ್ಮಾ ಮತ್ತು ಪ್ರವೀಣ್ ಕಕ್ಕರ್ ನಿವಾಸದಲ್ಲಿ ಇನ್ನೂ ಕೂಡ ತಮ್ಮ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ವೇಳೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸುದಿಸಂಸ್ಥೆ ಎಎನ್ಐ ವರದಿ ಮಾಡಿದೆ.


ಭಾನುವಾರ ದೆಹಲಿಯ ಐಟಿ ಅಧಿಕಾರಿಗಳು ಇಂಧೋರ್ ನ ಪ್ರವೀಣ್ ಕಕ್ಕರ್, ಕಮಲ್ ನಾಥ್ ಅವರ ಮಾಜಿ ಸಲಹೆಗಾರರಾದ ಆರ್.ಕೆ. ಮಿಗ್ಲನಿ ಅವರ ನಿವಾಸದ ಮೇಲೆ ದಾಳಿ ನಡೆಸಿದರು. ತೆರಿಗೆ ವಂಚನೆ ಆರೋಪದ ಮೇಲೆ ಇಂದೋರ್, ಭೋಪಾಲ್, ಗೋವಾ ಮತ್ತು ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಕನಿಷ್ಠ 50 ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಕಕ್ಕರ್ ಅವರ ನಿವಾಸದ ಮೇಲೆ ಭಾನುವಾರ ಮುಂಜಾನೆ 15 ಸದಸ್ಯರ ಐಟಿ ತಂಡ ದಾಳಿ ನಡೆಸಿದೆ. ಈ ವೇಳೆ ಅಧಿಕಾರಿಗಳು ಸುಮಾರು ಒಂಬತ್ತು ಕೋಟಿ ರೂ. ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಏತನ್ಮಧ್ಯೆ, ಭಾನುವಾರ ಸಿಆರ್ಪಿಎಫ್ ಮತ್ತು ಮಧ್ಯಪ್ರದೇಶ ಪೊಲೀಸ್ ಅಧಿಕಾರಿಗಳ ನಡುವೆ ತೀವ್ರವಾದ ವಾದ-ವಿವಾದ ನಡೆದಿದೆ. ಅಶ್ವಿನ್ ಶರ್ಮಾ ವೃತ್ತಿಯಯಲ್ಲಿ ಉದ್ಯಮಿಯಾಗಿದ್ದಾರೆ. ಪ್ರವೀಣ್ ಕಕ್ಕರ್ ಅವರ ಸಹಾಯಕನಾಗಿದ್ದ ಅಶ್ವಿನ್ ಶರ್ಮಾ ಅವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿಆರ್ಪಿಎಫ್ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ  30 ನಿಮಿಷಗಳಿಗಿಂತ ಹೆಚ್ಚು ಕಾಲ ಮಾಧ್ಯಮದ ಮುಂದೆಯೇ ವಾಗ್ವಾದ ನಡೆದಿದೆ.