ಇಂದು ಮಧ್ಯಾಹ್ನ ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ವಾಪಸ್!
ಪಾಕ್ ಅಧಿಕಾರಿಗಳು ಅಭಿನಂದನ್ ಅವರನ್ನು ರಾವಲ್ಪಿಂಡಿಯಿಂದ ಲಾಹೋರಿಗೆ ಕರೆತಂದು ಜಿನಿವಾ ಒಪ್ಪಂದದ ನಿಯಮಾವಳಿ ಪ್ರಕಾರ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಒಪ್ಪಿಸಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ಸಮಯದಲ್ಲಿ ವಾಘಾ ಗಡಿ ಮೂಲಕ ಭಾರತಕ್ಕೆ ಮರಳಲಿದ್ದಾರೆ. ಪಾಕ್ ವಶದಿಂದ ಬಿಡುಗಡೆಗೊಂಡು ಭಾರತಕ್ಕೆ ಆಗಮಿಸುತ್ತಿರುವ ಅಭಿನಂದನ್ ಅವರನ್ನು ಭಾರತೀಯ ವಾಯು ಪಡೆಯ ನಿಯೋಗ ಸ್ವೀಕರಿಸಲಿದೆ.
ಮಾಹಿತಿಯ ಪ್ರಕಾರ, ಪಾಕ್ ಅಧಿಕಾರಿಗಳು ಅಭಿನಂದನ್ ಅವರನ್ನು ರಾವಲ್ಪಿಂಡಿಯಿಂದ ಲಾಹೋರಿಗೆ ಕರೆತಂದು ಜಿನಿವಾ ಒಪ್ಪಂದದ ನಿಯಮಾವಳಿ ಪ್ರಕಾರ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಒಪ್ಪಿಸಲಿದ್ದಾರೆ ಎನ್ನಲಾಗಿದೆ.
ಪಾಕ್ ವಾಯು ಪಡೆಯ ಮೂರು ಫೈಟರ್ ಜೆಟ್ ವಿಮಾನ ಗಳು ಬುಧವಾರ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿ ಒಳನುಗ್ಗಿ ಬಂದಾಗ ಅವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಿಗ್ 21 ಫೈಟರ್ ಜೆಟ್ ವಿಮಾನಗಳ ಪೈಕಿ ಒಂದು ವಿಮಾನದ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮ್ಮ ವಿಮಾನ ಪತನಗೊಂಡಾಗ ಪಿಓಕೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಆಗ ಪಾಕ್ ಸೇನೆ ಅವರನ್ನು ಬಂಧಿಸಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಪೈಲಟ್ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಷರತ್ತಿಗೂ ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ವಿಂಗ್ ಕಮಾಂಡರ್'ಗೆ ತೊಂದರೆ ಮಾಡಿದರೆ ದಾಳಿ ನಡೆಸಲಾಗುವುದು ಎಂದು ಭಾರತ ಪಾಕಿಸ್ತಾನಕ್ಕೆ ವಾರ್ನಿಂಗ್ ಕೊಟ್ಟಿತ್ತು. ಭಾರತ ಈ ನಿಲುವಿಗೆ ಬೆಂಬಲವಾಗಿ ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಹತ್ತು ಪ್ರಮುಖ ದೇಶಗಳು ನಿಂತದ್ದೇ ಪಾಕ್ ಮೇಲಿನ ಒತ್ತಡ ಹೆಚ್ಚಲು ಕಾರಣವಾಗಿತ್ತು. ಇದಕ್ಕೆ ಹೆದರಿದ ಪಾಕ್ ಶಾಂತಿ ಕಾಪಾಡುವ ಉದ್ದೇಶದಿಂದ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಹೇಳಿತ್ತು.