ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ- ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನುಮತಿ ನೀಡದರೆ ತಾವು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಂತಸದಿಂದ ಸ್ಪರ್ಧಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನುಮತಿ ನೀಡದರೆ ತಾವು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಂತಸದಿಂದ ಸ್ಪರ್ಧಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕೇರಳದ ವಾಯನಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ "ಕಾಂಗ್ರೆಸ್ ಅಧ್ಯಕ್ಷರು ನನಗೆ ವಾರಣಾಸಿಯಿಂದ ಸ್ಪರ್ಧಿಸಲು ಹೇಳಿದರೆ ನಾನು ಸಂತಸದಿಂದ ಸ್ಪರ್ಧಿಸುತ್ತೇನೆ " ಎಂದು ಹೇಳಿದರು. ಎರಡು ದಿನಗಳ ಕಾಲ ವಯನಾಡಿನ ಪ್ರವಾಸವನ್ನು ಮುಗಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೋದಿ ಸರ್ಕಾರವು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಹರಿಹಾಯ್ದರು.
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶವನ್ನು ವಿಭಜಿಸಿದ್ದಾರೆ. ಅವರು ಕೇವಲ ಶ್ರೀಮಂತರ ಹಿತವನ್ನು ರಕ್ಷಿಸಿ ದೇಶದ ಅತಿ ದೊಡ್ಡ ಸಮುದಾಯವಾಗಿರುವ ರೈತರನ್ನು ಕಡೆಗಣಿಸಿದ್ದಾರೆ. ಬಿಜೆಪಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿತ್ತು, ಮತ್ತು ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂಗಳನ್ನು ಹಾಕುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ರಾಹುಲ್ ಗಾಂಧಿಯವರಿಗೆ ಸತ್ಯ ಮತ್ತು ನ್ಯಾಯ ಮಹತ್ವದ್ದಾಗಿರುತ್ತದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ಇದಕ್ಕೂ ಮೊದಲು ಅವರು ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸಿಆರ್ಪಿಎಫ್ ಸೈನಿಕ ವಸಂತ್ ಕುಮಾರ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದರು