ಮುಜಫರ್ನಗರ: ಮಹಿಳೆಯರ ಮೇಲಿನ ಅಪರಾಧದ ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಮಹಿಳೆಯೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ಈ ದಾಳಿಯಲ್ಲಿ 30 ವರ್ಷದ ಮಹಿಳೆ ಶೇಕಡಾ 30 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಘಟನೆಯ ಕುರಿತು ಮಾಹಿತಿ ನೀಡಿರುವ ಶಾಹಪುರ್  ಪೊಲೀಸ್ ಠಾಣೆಯ ಸರ್ಕಲ್ ಅಧಿಕಾರಿ ಗಿರ್ಜಾ ಶಂಕರ್ ತ್ರಿಪಾಠಿ, "ಬುಧವಾರ ರಾತ್ರಿ ನಾಲ್ವರು ಪುರುಷರು ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಆಸಿಡ್ ಸುರಿದಿದ್ದಾರೆ ಎಂದಿದ್ದಾರೆ. ಇದಕ್ಕೂ ಮೊದಲು ಮಹಿಳೆ ಆರೋಪಿಗಳ ವಿರುದ್ಧ ದಾಖಲಿಸಿರುವ ಅತ್ಯಾಚಾರದ ಪ್ರಕರಣವನ್ನು ಹಿಂಪಡೆಯುವಂತೆ ದುರುಳರು ಆಕೆಯನ್ನು ಹಿಂಸಿಸಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಆರೋಪಿಗಳು ಆಕೆಯ ಮೇಲೆ ಆಸಿಡ್ ಸುರಿದಿದ್ದಾರೆ" ಎಂದುತ್ರಿಪಾಠಿ ಮಾಹಿತಿ ನೀಡಿದ್ದಾರೆ.


ಸದ್ಯ ಪ್ರಕರಣದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ತ್ರಿಪಾಠಿ ಹೇಳಿದ್ದಾರೆ.


ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಕ್ಕೂ ಮೊದಲು ಮಹಿಳೆ ಪೊಲೀಸರ ಬಳಿ ತೆರಳಿ ದೂರು ನೀಡಿದ್ದಾಳೆ. ಆದರೆ, ಪ್ರಕರಣದಲ್ಲಿ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಈ ಕುರಿತು ಪೊಲೀಸರನ್ನು ಪ್ರಶ್ನಿಸಲಾಗಿ ಘಟನಾ ಸ್ಥಳದಲ್ಲಿ ನಡೆದ ಕುರಿತು ಯಾವುದೇ ಪುರಾವೆಗಳು ಸಿಗದ ಕಾರಣ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದಿದ್ದಾರೆ.