ಕಳೆದ ಸುಮಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಭಾರತದ ಮಧ್ಯ ಮತ್ತು ಪಶ್ಚಿಮ ರಾಜ್ಯಗಳು ನಲುಗಿ ಹೋಗಿವೆ. ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ ಸೇರಿ ಅನೇಕ ರಾಜ್ಯಗಳಲ್ಲಿ ಮಳೆಗೆ ಭಾರೀ ಹಾನಿಯುಂಟಾಗಿದೆ. ಗುಜರಾತ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇನ್ನು ಮಹಾರಾಷ್ಟ್ರದಲ್ಲಿ ಪ್ರವಾಹ ಮತ್ತು ಮಳೆಯಿಂದಾಗಿ 99 ಜನರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಇದೀಗ ಹವಾಮಾನ ಇಲಾಖೆಯು ಮಧ್ಯ ಭಾರತದ ಈ ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.


COMMERCIAL BREAK
SCROLL TO CONTINUE READING

ಮುಂಗಾರು, ಮಳೆಯ ರೂಪದಲ್ಲಿ ಅನಾಹುತವನ್ನು ತಂದಿದೆ. ಇದರಿಂದಾಗಿ ದೇಶದ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜೊತೆಗೆ ಪಶ್ಚಿಮ ಭಾರತದ ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ಪ್ರಾಣ ರಕ್ಷಣೆಗೆಂದು ಹರಸಾಹಸ ಪಡುತ್ತಿದ್ದಾರೆ. 


ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ಎಷ್ಟು ಮತಗಳು? ಇಲ್ಲಿದೆ ಲೆಕ್ಕಾಚಾರ


ಗುಜರಾತ್‌ ಅವ್ಯವಸ್ಥೆ:
ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಸಣ್ಣ ವಾಹನಗಳನ್ನು ನಿಲ್ಲಿಸಿ, ಪರಿಸ್ಥಿತಿ ತಿಳಿಯಾಗುವವರೆಗೆ ಕಾಯುವಂತಾಗಿತ್ತು. ಇನ್ನು ಗುಜರಾತಿನ ವಡೋದರಾದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ವಡೋದರಾದಲ್ಲಿ, ಎನ್‌ಡಿಆರ್‌ಎಫ್‌ ತಂಡವು ಸಂಭೋಯ್ ಗ್ರಾಮದ ಸುಮಾರು 178 ಜನರನ್ನು ರಕ್ಷಿಸಿದೆ. ಹವಾಮಾನ ಇಲಾಖೆ ಪ್ರಕಾರ, ಇಂದು ಗುಜರಾತ್‌ನದ ದಕ್ಷಿಣ ಭಾಗಗಳಲ್ಲಿ ಮತ್ತು ಸೌರಾಷ್ಟ್ರ ಪ್ರದೇಶದ ಹಲವೆಡೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.


ಮಹಾರಾಷ್ಟ್ರದಲ್ಲಿ ಭಾರೀ ಮಳೆಯ ಮುನ್ಸೂಚನೆ: 
ಗುಜರಾತ್‌ಗೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲೂ ಭಾರೀ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿಯವರೆಗೆ 99 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜೊತೆಗೆ ಲಾತೂರ್‌ನಲ್ಲಿ ಪ್ರವಾಹ ಮತ್ತು ಮಳೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜುಲೈ 16ರವರೆಗೆ ಪಿಯುಸಿವರೆಗಿನ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಲಾಗಿದೆ. 


ಮಧ್ಯಪ್ರದೇಶ-ಛತ್ತೀಸ್‌ಗಢದಲ್ಲಿ ಅನಾಹುತ: 
ಮುಂಬರುವ 24 ಗಂಟೆಯ ಮಧ್ಯಪ್ರದೇಶದಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೋಪಾಲ್, ಜಬಲ್ಪುರ್, ನರ್ಮದಾಪುರಂ, ಇಂದೋರ್ ಮತ್ತು ಉಜ್ಜಯಿನಿ ವಿಭಾಗಗಳ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭೋಪಾಲ್ ವಿಭಾಗದ ಸಾಗರ್, ದಾಮೋಹ್, ಉಮಾರಿಯಾದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಇನ್ನು ಛತ್ತೀಸ್‌ಗಢದಲ್ಲೂ ಮಳೆಯ ಎಚ್ಚರಿಕೆ ನೀಡಲಾಗಿದ್ದು, ರಾಜ್ಯದ ಮುಂಗೇಲಿ, ಬೆಮೆತಾರಾ, ಕಬೀರಧಾಮ, ದಾಂತೇವಾಡ ಮತ್ತು ಬಿಜಾಪುರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಂತೆಯೇ, ಸುಕ್ಮಾ, ರಾಜನಂದಗಾಂವ್, ದುರ್ಗ್, ಮಹಾಸಮುಂಡ್, ಧಮ್ತಾರಿ, ಗರಿಯಾಬಂದ್, ಬಲೋದಬಜಾರ್, ಜಾಂಜ್ಗೀರ್ ಮತ್ತು ಬಿಲಾಸ್ಪುರ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.


ರಾಜಸ್ಥಾನದಲ್ಲಿ ಮಳೆ ದುರಂತ:
ರಾಜಸ್ಥಾನದಲ್ಲಿ ಮಾನ್ಸೂನ್ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದ ಪೂರ್ವ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇಂದು ಸಹ ರಾಜ್ಯದ ಬಹುತೇಕ ಕಡೆ ಮಳೆ ಮುಂದುವರಿಯಲಿದೆ. ಇನ್ನು ರಾಜ್ಯದ ಬಾರ್ಮರ್‌ ಪ್ರದೇಶದ ನದಿಯೊಂದರಲ್ಲಿ ಸ್ನಾನ ಮಾಡಲೆಂದು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜುಲೈ 17 ರಿಂದ ಹಿಮಾಲಯದ ಕಡೆಗೆ ಮಾನ್ಸೂನ್‌ ಪ್ರವೇಶವಾಗುವ ಹಿನ್ನೆಲೆಯಲ್ಲಿ ಜುಲೈ 17-18 ರವರೆಗೆ ಪಶ್ಚಿಮ ರಾಜಸ್ಥಾನದ ಜೋಧ್‌ಪುರ ಮತ್ತು ಬಿಕಾನೇರ್ ವಿಭಾಗಗಳ ಕೆಲವು ಭಾಗಗಳಲ್ಲಿ ಮಳೆ ಚಟುವಟಿಕೆಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಜೈಪುರ ಹವಾಮಾನ ಕೇಂದ್ರದ ನಿರ್ದೇಶಕ ರಾಧೇಶ್ಯಾಮ್ ಶರ್ಮಾ ತಿಳಿಸಿದ್ದಾರೆ. ಜುಲೈ 16 ರಿಂದ ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.


ದಕ್ಷಿಣ ಭಾರತದ ಮೇಲೂ ಮಳೆಯ ರುದ್ರದೃಷ್ಟಿ: 
ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುತ್ತಿದೆ. ತೆಲಂಗಾಣದ ಮಂಚೇರಿಯನ್‌ನಲ್ಲಿ ಭಾರಿ ಮಳೆಗೆ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಇಬ್ಬರು ಸಿಲುಕಿಕೊಂಡಿದ್ದರು. ಈ ಬಳಿಕ ವಾಯುಪಡೆಯು ಹೆಲಿಕಾಪ್ಟರ್‌ ಮೂಲಕ ಆಗಮಿಸಿ, ಅವರನ್ನು ರಕ್ಷಿಸಿತ್ತು. ಇನ್ನು ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಬೆಟ್ಟ ಗುಡ್ಡಗಳು ಧರೆಶಾಹಿಯಾಗುತ್ತಿವೆ. ಜೊತೆಗೆ ಕೇರಳದಲ್ಲಿ ಭಾರೀ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕೇರಳದ ನಾಲ್ಕು ಜಿಲ್ಲೆಗಳಾದ ಇಡುಕ್ಕಿ, ವಯನಾಡು, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ಇಂದು ತೆಲಂಗಾಣದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.


ಇದನ್ನೂ ಓದಿ: 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು: ಈ ಮೂವರು ಸ್ಟಾರ್‌ ಆಟಗಾರರೇ ಕಾರಣ!


ಐಎಂಡಿ ಪ್ರಕಾರ, ಶುಕ್ರವಾರ ದೆಹಲಿಯಲ್ಲಿ ಸಣ್ಣ ಮಳೆಯಾಗಲಿದೆ. ಗುರುವಾರ ಕನಿಷ್ಠ ತಾಪಮಾನ 28.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸಾಮಾನ್ಯಕ್ಕಿಂತ ಒಂದು ಡಿಗ್ರಿ ಹೆಚ್ಚು ಮತ್ತು ಇಡೀ ದಿನ ಶಾಖ ಮತ್ತು ತೇವಾಂಶದಿಂದ ತುಂಬಿರುವ ಸಾಧ್ಯತೆಯಿದೆ ಎಂದು ಹೇಳಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.