ನವದೆಹಲಿ: 2020 ರ ಜೂನ್ 30ರೊಳಗೆ 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ವ್ಯವಸ್ಥೆಯನ್ನು ತಪ್ಪದೇ ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಗಡುವು ನೀಡಿ ಆದೇಶಿಸಿದೆ. 


COMMERCIAL BREAK
SCROLL TO CONTINUE READING

'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ವ್ಯವಸ್ಥೆಯಡಿಯಲ್ಲಿ, ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿರುವ ಪಡಿತರ ಅಂಗಡಿಗಳಿಂದ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಡಿ ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತೆಲಂಗಾಣ ಮತ್ತು ತ್ರಿಪುರಾ ಸೇರಿ ಒಟ್ಟು ಹತ್ತು ರಾಜ್ಯಗಳು ಆಹಾರಧಾನ್ಯಗಳನ್ನು ಒದಗಿಸುತ್ತಿವೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶನಿವಾರ ಹೇಳಿದ್ದಾರೆ. 


"ಮುಂದಿನ ಜೂನ್ 30, 2020 ರ ವೇಳೆಗೆ, 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ವ್ಯವಸ್ಥೆಯನ್ನು ಇಡೀ ದೇಶದಲ್ಲಿ ಯಾವುದೇ ವಿಳಂಬವಿಲ್ಲದೆ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಕಾರ್ಯವನ್ನು ವೇಗಗೊಳಿಸಲು ನಾವು ರಾಜ್ಯಗಳಿಗೆ ಪತ್ರ ಬರೆದಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಕುಟುಂಬ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಂತಹ ಸಂದರ್ಭದಲ್ಲಿ ಪಿಡಿಎಸ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಹೊಸ ವ್ಯವಸ್ಥೆ ಹೊಂದಿದೆ. ಇದರಿಂದಾಗಿ ನಕಲಿ ರೇಷನ್ ಕಾರ್ಡ್ ಹೊಂದಿರುವವರನ್ನು ಪತ್ತೆ ಹಚ್ಚಲು ನೆರವಾಗಲಿದೆ" ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.