ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು (ಸೋಮವಾರ) ಮಹತ್ವದ ಸಂಪುಟ ಸಭೆ ನಡೆಯಲಿದೆ. ಇಂದು ಬೆಳಿಗ್ಗೆ 09.30 ಕ್ಕೆ ಪ್ರಧಾನ ಮಂತ್ರಿ ನಿವಾಸದಲ್ಲಿ (7 ಲೋಕ ಕಲ್ಯಾಣ್ ಮಾರ್ಗ) ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಸ್ಥಿತಿ-ಗತಿ, 35 ಎ ವಿಧಿ ಮತ್ತು 370 ನೇ ವಿಭಾಗವನ್ನು ತೆಗೆದುಹಾಕುವ ಬಗ್ಗೆ ಚರ್ಚಿಸಬಹುದು ಎಂದು ಊಹಿಸಲಾಗಿದೆ. ಅದೇ ಸಮಯದಲ್ಲಿ, ಜಮ್ಮು-ಕಾಶ್ಮೀರದ ಒತ್ತಡದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಪಾಲ್ ಮಲಿಕ್ ಅವರು ರಾಜ್ಯ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಮತ್ತೊಂದೆಡೆ, ಕಾಶ್ಮೀರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಲಾಗಿದೆ. ಜಮ್ಮುವಿನಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಶ್ರೀನಗರದ ಎಲ್ಲಾ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೆ ತರಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಸಮ್ಮೇಳನ ಮುಖಂಡ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಮುಖಂಡರಾದ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ. ಜಮ್ಮುವಿನ 8 ಜಿಲ್ಲೆಗಳಲ್ಲಿ ಸಿಆರ್‌ಪಿಎಫ್‌ನ 40 ಕಂಪನಿಗಳನ್ನು ನಿಯೋಜಿಸಲಾಗಿದೆ.


ಶ್ರೀನಗರದಲ್ಲಿನ ಭದ್ರತೆಯ ದೃಷ್ಟಿಯಿಂದ ಕೇಬಲ್ ಟಿವಿಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸೆಕ್ಷನ್ 144 ಜಾರಿಯಲ್ಲಿರಲಿದ್ದು, ಯಾವುದೇ ನಾಯಕರಿಗೆ ರ್ಯಾಲಿ ಮಾಡಲು ಅನುಮತಿಸಲಾಗುವುದಿಲ್ಲ. 


ಈ ಎಲ್ಲ ವ್ಯವಸ್ಥೆಗಳನ್ನು ಭದ್ರತೆಯ ದೃಷ್ಟಿಯಿಂದ ಮಾಡಲಾಗುತ್ತಿದೆ. ಸ್ಥಳೀಯ ನಾಯಕರ ಮೇಲೆ ಉದ್ಬವಿಸಬಹುದಾದ ಪ್ರಶ್ನೆ ಹಾಗೂ ರಾಜ್ಯದಲ್ಲಿ ಸೂಕ್ತ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಇವೆಲ್ಲವನ್ನೂ ಮಾಡಲಾಗುತ್ತಿದೆ ಎಂದು  ಗೃಹ ಸಚಿವಾಲಯವು ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪರವಾಗಿ ರಾಜ್ಯದಲ್ಲಿ ಯಾವುದೇ ಕರ್ಫ್ಯೂ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 


ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತವು ಕಣಿವೆಯನ್ನು ತೊರೆಯುವ ಸಲಹೆ ನೀಡಿದ ನಂತರ, ಎಲ್ಲಾ ಪ್ರವಾಸಿಗರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಭಾನುವಾರ, ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಕಾರ್ಯದರ್ಶಿ ಅನಿಲ್ ಗಬಾ ಮತ್ತು ಇತರ ಭದ್ರತಾ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಚರ್ಚಿಸಲು ಈ ಸಭೆ ನಡೆದಿದೆ ಎಂದು ನಂಬಲಾಗಿದೆ.


ಸದ್ಯದ ಜಮ್ಮು ಕಾಶ್ಮೀರದ ಒತ್ತಡದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆಗಸ್ಟ್ 5 ರಂದು ನಡೆಯಲಿರುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ಪರೀಕ್ಷೆ ನಡೆಯುವ ಮುಂದಿನ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಕತುವಾದಲ್ಲಿ ಸಹ ಶಾಲೆಗಳು ಮತ್ತು ಕಾಲೇಜುಗಳನ್ನು ಸರ್ಕಾರದ ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ.