2022ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಮಾತನಾಡುತ್ತಾ, ಇದು ಯುದ್ಧ ಮಾಡುವ ಸಮಯವಲ್ಲ ಎಂದಿದ್ದರು. ಆದರೆ, 2023 ಹಲವು ಕದನಗಳಿಗೆ ಸಾಕ್ಷಿಯಾಯಿತು. ರಷ್ಯಾ - ಉಕ್ರೇನ್ ಯುದ್ಧ ತನ್ನ ಮೂರನೇ ವರ್ಷವನ್ನು ಸಮೀಪಿಸುತ್ತಿದೆ. ಇನ್ನೊಂದೆಡೆ ಅಕ್ಟೋಬರ್ 7ರಂದು ಹಮಾಸ್ ಉಗ್ರ ಸಂಘನೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ, ಗಾಜಾ ಪಟ್ಟಿಯಲ್ಲಿ ಆರಂಭಗೊಂಡ ಕದನ ಇತ್ತೀಚಿನ ಸಮಯದಲ್ಲೇ ಅತ್ಯಂತ ತೀವ್ರವಾದ ಕದನವಾಗಿದೆ.


COMMERCIAL BREAK
SCROLL TO CONTINUE READING

ಮುಂದಿನ ದಿನಗಳನ್ನು ಗಮನಿಸುವುದಾದರೆ, ಇತರ ಜಾಗತಿಕ ಚಕಮಕಿಗಳೂ ಗಂಭೀರ ಸಂಕಷ್ಟಗಳನ್ನು ತಂದೊಡ್ಡುವಂತೆ ಗೋಚರಿಸುತ್ತಿವೆ. ಸಾಕಷ್ಟು ಆರ್ಥಿಕ ಸಂಕಷ್ಟಗಳ ಹೊರತಾಗಿಯೂ ಚೀನಾ ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿರುವುದು ಭಾರತ ಮತ್ತು ಪಾಶ್ಚಾತ್ಯ ರಾಷ್ಟ್ರಗಳಿಗೆ ಕಳವಳದ ವಿಚಾರವಾಗಿದೆ.


2023: ಕಾರ್ಯತಂತ್ರದ ವಾಸ್ತವಗಳು
1. ಮಧ್ಯ ಪೂರ್ವದಲ್ಲಿನ ಬಿಕ್ಕಟ್ಟು: 
ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಸಂಬಂಧಗಳನ್ನು ಸಹಜಗೊಳಿಸಲು ಎರಡು ವರ್ಷಗಳ ನಿರಂತರ ಪ್ರಯತ್ನಗಳ ಬಳಿಕ, ಮಧ್ಯ ಪೂರ್ವದ ಪರಿಸ್ಥಿತಿ ಮತ್ತೊಮ್ಮೆ ಬಿಗಡಾಯಿಸಿದೆ. ಮಧ್ಯ ಪೂರ್ವದಲ್ಲಿ ಸಾಧಿತವಾಗುತ್ತಿದ್ದ ಪ್ರಗತಿಯನ್ನು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಹಾಳುಗೆಡವಿತು. ಈ ದಾಳಿಯಲ್ಲಿ 1,200ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದು, 230ಕ್ಕೂ ಹೆಚ್ಚು ಜನರನ್ನು ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಒಯ್ದಿದ್ದರು.


ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೈಗೊ‌ಡ ಭಾರೀ ದಾಳಿಗಳಲ್ಲಿ ಗಾಜಾ ಪಟ್ಟಿಯಲ್ಲಿ 20,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಅಮೆರಿಕಾ ಸೇರಿದಂತೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದೆ. ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಸಂಬಂಧ ವೃದ್ಧಿ ಪ್ರಕ್ರಿಯೆ ಈಗ ಹಳಿ ತಪ್ಪಿದಂತಾಗಿದ್ದು, ಗಾಜಾದ ಭವಿಷ್ಯವೂ ಅನಿಶ್ಚಿತವಾಗಿ ಮುಂದುವರಿದಿದೆ.


ಇದನ್ನೂ ಓದಿ- ಬಾಹ್ಯಾಕಾಶದಲ್ಲಿ ನಿತ್ಯಕರ್ಮ: ಶೂನ್ಯ ಗುರುತ್ವಾಕರ್ಷಣೆಯಲ್ಲಿ ಶೌಚಾಲಯ ಬಳಕೆಯ ಹಿಂದಿನ ಮರ್ಮ


2. ಅಮೆರಿಕಾ ಭಾರತ ಸಂಬಂಧದಲ್ಲಿ ಬಿಕ್ಕಟ್ಟು: 
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿ ಮತ್ತು ಜೋ ಬಿಡೆನ್ ಅವರ ಯಶಸ್ವಿ ಭಾರತ ಭೇಟಿಯ ಬಳಿಕ ಭಾರತ ಅಮೆರಿಕಾ ಸಂಬಂಧ ಸಾಕಷ್ಟು ಉತ್ತಮಗೊಂಡಿತ್ತು. ಆದರೆ ಅಮೆರಿಕಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನೊಬ್ಬನ ಹತ್ಯಾ ಯತ್ನದಲ್ಲಿ ಭಾರತ ಸರ್ಕಾರದ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ ಎಂಬ ಆರೋಪ ಈ ಸಂಬಂಧದ ಮೇಲೆ ಕಾರ್ಮೋಡ ಬೀರಿದೆ.


ಈ ಆರೋಪಗಳಿಗೆ ಭಾರತದ ಪ್ರತಿಕ್ರಿಯೆ ಕೆನಡಾದಲ್ಲಿ ಇನ್ನೊರ್ವ ಖಲಿಸ್ತಾನಿ ಪ್ರತ್ಯೇಕತಾವಾದಿಯನ್ನು ಭಾರತ ಹತ್ಯೆ ಮಾಡಿದ ಎಂಬ ಆರೋಪಕ್ಕೆ ನೀಡಿದ ಪ್ರತಿಕ್ರಿಯೆಗಿಂತ ಭಿನ್ನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತ ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಸದಾ ಬದ್ಧತೆ ಪ್ರದರ್ಶಿಸಿದ್ದು, ಒಂದು ವೇಳೆ ಸೂಕ್ತ ಸಾಕ್ಷಿಗಳನ್ನು ಒದಗಿಸಿದರೆ, ಅಮೆರಿಕಾದಲ್ಲಿ ಭಾರತೀಯ ಪ್ರಜೆಗಳು ಸಂಚು ರೂಪಿಸಿರುವ ಆರೋಪದ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ.


3. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮಗಳು: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರಿದಿದ್ದು, ಇದರ ಪರಿಣಾಮವಾಗಿ ಪಾಶ್ಚಾತ್ಯ ರಾಷ್ಟ್ರಗಳು ಇನ್ನೂ ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಉಕ್ರೇನ್ ಐರೋಪ್ಯ ಒಕ್ಕೂಟದಿಂದ 18.5 ಬಿಲಿಯನ್ ಯೂರೋ ಮತ್ತು ಅಮೆರಿಕಾದಿಂದ 8 ಬಿಲಿಯನ್ ಡಾಲರ್ ಸಹಾಯವನ್ನು ಎದುರು ನೋಡುತ್ತಿದ್ದು, ಇದರಲ್ಲಿ ಮಹತ್ವದ ಮಿಲಿಟರಿ ಬೆಂಬಲವೂ ಸೇರಿದೆ. ಆದರೆ, ಅಮೆರಿಕನ್ ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್ನರ ವಿರೋಧದಿಂದ ಮತ್ತು ಐರೋಪ್ಯ ಒಕ್ಕೂಟದಲ್ಲಿ ಹಂಗೆರಿಯ ವಿರೋಧದಿಂದ ಈ ಸಹಾಯ ಪ್ಯಾಕೇಜ್ ನಿಲುಗಡೆಗೊಂಡಿದೆ.


ಇದರೊಡನೆ, ವ್ಲಾಡಿಮಿರ್ ಪುಟಿನ್ ಅವರು ಮತ್ತೊಂದು ಅವಧಿಗೆ ರಷ್ಯನ್ ಅಧ್ಯಕ್ಷರಾಗಿ ಮರು ಚುನಾಯಿತರವಾಗುವುದು ಬಹುತೇಕ ನಿಶ್ಚಿತವಾಗಿದೆ. ನಿರ್ಬಂಧಗಳ ಹೊರತಾಗಿಯೂ, ರಷ್ಯನ್ ಆರ್ಥಿಕತೆ ಬಹಳ ಸದೃಢವಾಗಿದೆ. ಮಾಸ್ಕೋ ಮತ್ತು ಬೀಜಿಂಗ್ ನಡುವೆ ಹೆಚ್ಚುತ್ತಿರುವ ಸ್ನೇಹ ಸಂಬಂಧ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೊಸ ತಲೆನೋವು ಮೂಡಿಸಿದೆ.


4. ಭಾರತದ ಮುಂದಿದೆ ಮಾಲ್ಡೀವ್ಸ್ ಸವಾಲು: 'ಇಂಡಿಯಾ ಔಟ್' (ಭಾರತವನ್ನು ಹೊರಹಾಕೋಣ) ಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ, ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಭಾರತಕ್ಕೆ ಮಾಲ್ಡೀವ್ಸ್‌ನಿಂದ ತನ್ನ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುವಂತೆ ಮನವಿ ಮಾಡಿದೆ. ಮಾಲ್ಡೀವ್ಸ್ ಸರ್ಕಾರ ಜಲ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತದ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲು ಆಲೋಚಿಸುತ್ತಿರುವಂತೆ ಕಂಡುಬರುತ್ತಿದೆ. ಮುಯಿಝು ಸರ್ಕಾರ ಚೀನಾದೊಡನೆ ಹೆಚ್ಚು ಆತ್ಮೀಯ ಸಂಬಂಧ ಹೊಂದಿದೆ.


ಇದನ್ನೂ ಓದಿ- ಉಡಾವಣೆಗೆ ಸಿದ್ಧವಾದ ಎಕ್ಸ್‌ಪೋಸ್ಯಾಟ್: ಕ್ಷ ಕಿರಣಗಳ ಅಧ್ಯಯನದಿಂದ ಬ್ರಹ್ಮಾಂಡದ ರಹಸ್ಯ ಅನಾವರಣ


5. ಭಾರತದ ಅತಿದೊಡ್ಡ ಚಿಂತೆ - ಚೀನಾ: ಚೀನಾ ಇಂದಿಗೂ ಭಾರತದ ಪಾಲಿನ ಅತಿದೊಡ್ಡ ಕಾಳಜಿ ಮತ್ತು ಕಾರ್ಯತಂತ್ರದ ಸವಾಲಿನ ರಾಷ್ಟ್ರವಾಗಿದೆ. ಭಾರತ ಚೀನಾದ ಮಿಲಿಟರಿ ಶಕ್ತಿಯನ್ನು ಎದುರಿಸಬಲ್ಲ ಸೇನಾಬಲವನ್ನು ಮುಂದಿಟ್ಟಿರುವುದರಿಂದ, ಭಾರತ - ಚೀನಾಗಳ ಗಡಿ ಉದ್ವಿಗ್ನತೆ ಈಗ ನಾಲ್ಕನೇ ಚಳಿಗಾಲಕ್ಕೂ ಕಾಲಿಟ್ಟಿದೆ. ಅದರೊಡನೆ, ಭಾರತದ ಪ್ರಮುಖ ರಕ್ಷಣಾ ಸಹಯೋಗಿ ರಷ್ಯಾ ತನ್ನ ಆರ್ಥಿಕ ಬೆಂಬಲಕ್ಕಾಗಿ ಚೀನಾ ಮೇಲೆ ಹೆಚ್ಚು ಹೆಚ್ಚು ಅವಲಂಬಿತವಾಗಿದೆ. ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಚೀನಾಗೆ ಹೆಚ್ಚು ಹತ್ತಿರವಾಗುತ್ತಿರುವುದೂ ಭಾರತದ ಚಿಂತೆ ಹೆಚ್ಚಿಸಿದೆ.


6. ಜಿ20 ಗ್ಲೋಬಲ್ ಸೌತ್ ಸ್ಥಾನಮಾನ: ಜಿ20 ಶೃಂಗಸಭೆಯ ಕೊನೆಯಲ್ಲಿ ಭಾರತ ಜಂಟಿ ಹೇಳಿಕೆ ನೀಡಲು ಯಶಸ್ವಿಯಾಗಿದ್ದು ಜಗತ್ತಿನಾದ್ಯಂತ ಒಂದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಜಿ20 ಶೃಂಗಸಭೆಯ ಪ್ರಮುಖ ಫಲಿತಾಂಶವೆಂದರೆ, ಭಾರತ ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಸಾಧಿಸಿರುವ ದೇಶಗಳನ್ನು ಗ್ಲೋಬಲ್ ಸೌತ್ ಗುಂಪಿನಡಿ ಜೊತೆಯಾಗಿಸಲು ಯಶಸ್ವಿಯಾಗಿದೆ. ಇದು ಅಲಿಪ್ತ ಚಳುವಳಿಯ ಸಂದರ್ಭದಲ್ಲಿ ಭಾರತ ನೀಡಿದ್ದ ಜಾಗತಿಕ ನಾಯಕತ್ವ 21ನೇ ಶತಮಾನದಲ್ಲಿ ಗ್ಲೋಬಲ್ ಸೌತ್ ರೂಪದಲ್ಲಿ ಮುಂದುವರಿಯುತ್ತಿರುವಂತೆ ಕಂಡುಬರುತ್ತಿದೆ.


7. ಕಾಬೂಲ್ ಜೊತೆಗೆ ಸಂಬಂಧ: ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿ ನಾಯಕತ್ವದಲ್ಲಿ ಬದಲಾವಣೆ ಕಂಡಿತು. ದೆಹಲಿಯಲ್ಲಿದ್ದ ರಾಯಭಾರಿ ಮರಳಿ, ಮುಂಬೈ ಮತ್ತು ಹೈದರಾಬಾದ್‌ನಲ್ಲಿದ್ದ ಅಫ್ಘಾನಿಸ್ತಾನದ ರಾಯಭಾರಿಗಳು ನಾಯಕತ್ವ ವಹಿಸಿಕೊಂಡರು. ಅವರು ತಾಲಿಬಾನಿ ಧ್ವಜವನ್ನು ಬಳಸುವುದಿಲ್ಲ ಮತ್ತು ಅಧಿಕೃತ ಸಂವಹನದಲ್ಲಿ ತಾಲಿಬಾನ್ ನಿಯಮಗಳನ್ನು ಒಳಗೊಳ್ಳುವುದಿಲ್ಲ ಎಂದಿರುವುದು ಭಾರತಕ್ಕೆ ನೆಮ್ಮದಿ ತಂದಿದೆ.


ಭಾರತ ಇಂದಿಗೂ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದೆ. ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಗೆ ತಾಂತ್ರಿಕ ತಂಡವನ್ನು ನೇಮಿಸಲಾಗಿದ್ದು, ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೂ ಸಹ ಅಫ್ಘಾನಿಸ್ತಾನ ನಾಗರಿಕರಿಗೆ ಪಾಸ್‌ಪೋರ್ಟ್ ಮತ್ತು ವೀಸಾ ಸೌಲಭ್ಯ ಒದಗಿಸಲು ಆಡಳಿತದೊಡನೆ ಕಾರ್ಯಾಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಚೀನಾ ಸಹ ಕಾಬೂಲ್‌ನಲ್ಲಿ ಶಾಶ್ವತ ರಾಯಭಾರಿಯನ್ನು ನೇಮಿಸಿದೆ.


ಇದನ್ನೂ ಓದಿ- ಬಾಹ್ಯಾಕಾಶದ ಪ್ರಣಯ: ಭೂಮಿಯ ಸೀಮೆಯ ಹೊರಗೆ ಸಂತಾನೋತ್ಪತ್ತಿ ಸಾಧ್ಯವೇ?


2024: ಸವಾಲುಗಳು ಮತ್ತು ಅವಕಾಶಗಳು
ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶ ಭಾರತದ ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ.


ಒಂದು ವೇಳೆ ಈ ಚುನಾವಣೆಯಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಈಗನ ರೀತಿಯಲ್ಲೇ, ಅಥವಾ ಹೆಚ್ಚಿನ ಬೆಂಬಲದೊಡನೆ ಅಧಿಕಾರಕ್ಕೆ ಬಂದರೆ, ಜಾಗತಿಕ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಭಾರತದ ನಿಲುವು ಇದೇ ರೀತಿ ಮುಂದುವರಿಯುವ ಸಾಧ್ಯತೆಗಳಿವೆ. ಆದರೆ, ಬಿಜೆಪಿ ಏನಾದರೂ ಕಡಿಮೆ ಸ್ಥಾನ ಪಡೆದರೆ, ಮೈತ್ರಿ ಸರ್ಕಾರದ ಸ್ಥಾಪನೆಯಾದರೆ, ಅದು ಭಾರತದ ವಿದೇಶಾಂಗ ನೀತಿಗಳ ಮೇಲೆ ಪರಿಣಾಮ ಬೀರಬಲ್ಲದು.


ಚುನಾವಣಾ ಫಲಿತಾಂಶಗಳ ಹೊರತಾಗಿಯೂ, ಭಾರತದ ಒಟ್ಟಾರೆ ವಿದೇಶಾಂಗ ನೀತಿಯ ದಿಕ್ಕು ಇದೇ ರೀತಿ ಮುಂದುವರಿಯುವ ಸಾಧ್ಯತೆಗಳಿದ್ದು, ಒಂದಷ್ಟು ಹೊಂದಾಣಿಕೆಗಳು ಏರ್ಪಡಬಹುದು.


1. ಅಮೆರಿಕಾ ಮತ್ತು ಕೆನಡಾ ಸಂಬಂಧ:
ಅಮೆರಿಕಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಯ ಸಂಚಿನಲ್ಲಿ ಭಾರತ ಸರ್ಕಾರದ ಸಿಬ್ಬಂದಿಯ ಕೈವಾಡವಿದೆ ಎಂಬ ಆರೋಪದಡಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಭಾರತದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಅತಿಥಿಯಾಗಿ ಭಾಗವಹಿಸಲು ನಿರಾಕರಿಸಿರುವುದು ನವದೆಹಲಿಗೆ ಕೊಂಚಮಟ್ಟಿಗೆ ಅಸಮಾಧಾನ ಮೂಡಿಸಿದೆ. ಇದರಿಂದ ಕ್ವಾಡ್ ಸಭೆಯನ್ನು ಮುಂದೂಡುವುದು ಅನಿವಾರ್ಯವಾಗಿದೆ. ಆದರೆ, ಭಾರತ ಮತ್ತು ಅಮೆರಿಕಾಗಳು ಪರಸ್ಪರರ ಮೇಲೆ ಅಪಾರವಾಗಿ ಅವಲಂಬಿಸಿದ್ದು, ಈ ಸಂಬಂಧ ಏರುಪೇರಾಗುವುದನ್ನು ಅಪೇಕ್ಷಿಸುವುದಿಲ್ಲ.


ಆದರೆ ಕೆನಡಾದ ಜೊತೆಗಿನ ಪರಿಸ್ಥಿತಿ ಭಾರತ ಕೆನಡಾ ಸಂಬಂಧದ ಮೇಲೆ ತೊಂದರೆ ಉಂಟುಮಾಡಿದೆ. ಭಾರತ ವೀಸಾ ನಿಯಮಗಳನ್ನು ಕೊಂಚಮಟ್ಟಿಗೆ ಸರಳಗೊಳಿಸಿದ್ದು, ಸಾಮಾನ್ಯವಾಗಿ ಭಾರತೀಯರು ಸರ್ಕಾರದ ಕ್ರಮಗಳನ್ನು ಒಪ್ಪಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸರ್ಕಾರವನ್ನು ಟೀಕಿಸುವ ಜನರೂ ಸಹ ಕೆನಡಾ ವಿಚಾರದಲ್ಲಿ ಸರ್ಕಾರ ಪ್ರತಿಕ್ರಿಯಿಸಿದ ರೀತಿಯನ್ನು ದೂರಿಲ್ಲ. ಆದರೆ ಅಮೆರಿಕಾದೊಡನೆ ವ್ಯವಹರಿಸುವ ರೀತಿ ಕೊಂಚ ಭಿನ್ನವಾಗಿದ್ದು, ಭಾರತ ಅಮೆರಿಕಾ ಮತ್ತು ಕೆನಡಾ ಎರಡೂ ದೇಶಗಳನ್ನು ಪ್ರತ್ಯೇಕ ರೀತಿಯಲ್ಲಿ ನಿರ್ವಹಿಸಲಿದೆ.


ಇದನ್ನೂ ಓದಿ- ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ


2. ಪಾಕಿಸ್ತಾನದಲ್ಲಿ ನೂತನ ಸರ್ಕಾರ:
2019ರ ಬಳಿಕ, ಭಾರತದಲ್ಲಿ ಎನ್‌ಡಿಎ ಸರ್ಕಾರ ಮರು ಆಯ್ಕೆಗೊಂಡು, ಜಮ್ಮು ಮತ್ತು ಕಾಶ್ಮೀರದಲ್ಲಿ ಬದಲಾವಣೆಗಳನ್ನು ತಂದ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ಸಂಬಂಧ ತೀವ್ರ ಕುಸಿತ ಕಂಡಿದೆ. ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಹೊಸ ನಾಯಕರು ಬಂದರೂ, ಅಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಭಾರತ ಪಾಕಿಸ್ತಾನಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ ಎಂಬ ತನ್ನ ನೀತಿಯನ್ನು ಮುಂದುವರಿಸಿದೆ.


ಪಾಕಿಸ್ತಾನದಲ್ಲಿ ಚುನಾವಣೆಗಳು ಹತ್ತಿರಾಗುತ್ತಿದ್ದು, ಫೆಬ್ರವರಿ ತಿಂಗಳ ಬಳಿಕ ಹೊಸ ಸರ್ಕಾರದ ರಚನೆಯಾಗಬಹುದು. ಭಾರತದ ಲೋಕಸಭಾ ಚುನಾವಣೆಯ ಬಳಿಕ, ಪಾಕಿಸ್ತಾನದ ಜೊತೆಗೆ ಮರಳಿ ಮಾತುಕತೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ಆದರೆ ಅದು ನಡೆಯುತ್ತದೋ ಇಲ್ಲವೋ ಎನ್ನುವುದನ್ನು ಕಾಲವೇ ಹೇಳಬೇಕಿದೆ.


3. ಬಾಂಗ್ಲಾದೇಶದಲ್ಲಿನ ಫಲಿತಾಂಶ:
ಕಳೆದ 15 ವರ್ಷಗಳ ಅವಧಿಯಲ್ಲಿ, ಶೇಕ್ ಹಸೀನಾ ಅವರ ಆಡಳಿತದಡಿ ಭಾರತ ಬಾಂಗ್ಲಾದೇಶಗಳ ಸಂಬಂಧ ಸಾಕಷ್ಟು ಉತ್ತಮವಾಗಿದೆ. ಭಾರತ ಮುಂದಿನ ಚುನಾವಣೆಯಲ್ಲೂ ಶೇಕ್ ಹಸೀನಾ ಸರ್ಕಾರ ಆಡಳಿತಕ್ಕೆ ಬರಬೇಕೆಂದು ಬಯಸುತ್ತಿದ್ದು, ಅವರು ವಿರೋಧ ಪಕ್ಷಕ್ಕಿಂತಲೂ ಆಡಳಿತದಲ್ಲಿರುವುದು ಉತ್ತಮ ಎಂದು ಭಾರತ ಭಾವಿಸಿದೆ. ಅದಕ್ಕೆ ಹಿಂದೆ ನಡೆದ ಘಟನೆಗಳೂ ಕಾರಣವಾಗಿವೆ. ಭಾರತ ತನ್ನ ಈಶಾನ್ಯ ಪ್ರದೇಶಗಳು ಮತ್ತು ಬಾಂಗ್ಲಾದೇಶದ ನಡುವೆ ಸಂಚಾರ ಮತ್ತು ಸಾಗಾಣಿಕೆಯನ್ನು ಶೀಘ್ರವಾಗಿ ಉತ್ತಮಗೊಳಿಸಲು ಬಯಸುತ್ತಿದ್ದು, ಇದು ಎರಡೂ ದೇಶಗಳಿಗೆ ಪೂರಕವಾಗಲಿದೆ.


4. ಚೀನಾದೊಡನೆ ಉದ್ವಿಗ್ನತೆ ಮುಂದುವರಿಕೆ:
ಚೀನಾದೊಡನೆ 2020ರಿಂದಲೂ ಮುಂದುವರಿದಿರುವ ಗಡಿ ಉದ್ವಿಗ್ನತೆ ಈ ಬಾರಿ ಚುನಾವಣಾ ಪ್ರಚಾರದ ವಿಚಾರವಾಗುವ ಸಾಧ್ಯತೆಗಳಿವೆ. ಆದರೆ ಪ್ರಸ್ತುತ ಉದ್ವಿಗ್ನತೆ ಏನಾದರೂ ಇನ್ನಷ್ಟು ತೀವ್ರವಾದರೆ, ಅದು ಭಾರತದ ಭದ್ರತಾ ಪರಿಸ್ಥಿತಿ ಮತ್ತು ಆಂತರಿಕ ರಾಜಕಾರಣದ ಮೇಲೆ ಪರಿಣಾಮ ಬೀರಬಹುದು. ಚುನಾವಣಾ ವರ್ಷದಲ್ಲಿ ಭಾರತದ ಪ್ರಮುಖ ಎದುರಾಳಿಯಾಗಿರುವ ಚೀನಾ ಯಾವುದೇ ರೀತಿ ಪ್ರಚೋದನೆ ನೀಡಿದರೂ, ನವದೆಹಲಿ ಅದನ್ನು ಬಹಳಷ್ಟು ಜಾಗರೂಕತೆಯಿಂದ ಎದುರಿಸಬಹುದು. ಈ ಜಾಗರೂಕತೆ ಮುಂದಿನ ತಿಂಗಳುಗಳು ಅಥವಾ ಅದಕ್ಕಿಂತಲೂ ದೀರ್ಘಾವಧಿಯಲ್ಲಿ ಚೀನಾ ಕುರಿತು ಭಾರತದ ನಡೆಯನ್ನು ನಿರ್ದೇಶಿಸಬಲ್ಲದು.


5. ಪಶ್ಚಿಮ ಏಷ್ಯಾದಲ್ಲಿ ಮುಂದಿನ ಹಾದಿ:
ಇತ್ತೀಚಿನ ಚಕಮಕಿಗಳ ಪರಿಣಾಮವಾಗಿ, ಭಾರತದ ನಿಲುವುಗಳು ಕಳೆದ ಎರಡು ತಿಂಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿವೆ. ಭಾರತ ಆರಂಭದಲ್ಲಿ ಇಸ್ರೇಲ್‌ಗೆ ಬೆಂಬಲ ನೀಡಿದ್ದರೂ, ಅದಾದ ಬಳಿಕ ಪ್ಯಾಲೆಸ್ತೀನ್ ಅನ್ನೂ ಒಳಗೊಂಡ, ಹೆಚ್ಚು ಸಮತೋಲಿತ ನೀತಿಯನ್ನು ಆರಿಸಿತು. ಮತ್ತೆ ಕೊನೆಗೂ ವಿಶ್ವಸಂಸ್ಥೆಯ ಇತ್ತೀಚಿನ ಮತದಾನ ಪ್ರಕ್ರಿಯೆಯಲ್ಲಿ ಕದನ ವಿರಾಮದ ಪರವಾಗಿ ಮತ ಚಲಾಯಿಸಿತು. ಭಾರತದ ರಾಜತಾಂತ್ರಿಕತೆಯ ನಿಲುವುಗಳಲ್ಲಿನ ಬದಲಾವಣೆಗಳನ್ನು ಗ್ಲೋಬಲ್ ಸೌತ್‌ನ ಹಲವು ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿವೆ. ಆರಂಭದಲ್ಲಿ ಭಾರತ ಇಸ್ರೇಲ್‌ಗೆ ಬೆಂಬಲ ನೀಡಿದ್ದನ್ನು ಈ ರಾಷ್ಟ್ರಗಳು ಬೆಂಬಲಿಸಿರಲಿಲ್ಲ. ಯುನೆಸ್ಕೋದ ಉಪಾಧ್ಯಕ್ಷ ಪದವಿಗೆ ಪಾಕಿಸ್ತಾನದ ಎದುರು ಭಾರತ ಸೋಲು ಕಂಡಿದ್ದು ಭಾರತಕ್ಕೆ ಎಚ್ಚರಿಕೆಯ ಕರೆಯಾಗಿತ್ತು.


ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಈಗ ಬಹುತೇಕ ಕೊನೆಯ ಹಂತವನ್ನು ತಲುಪಿದೆ. ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ಆರಂಭದಲ್ಲಿ ಬೆಂಜಮಿನ್ ನೆತನ್ಯಾಹು ಅವರ ಕ್ರಮಗಳಿಗೆ ನೀಡಿದ ಪೂರ್ಣ ಪ್ರಮಾಣದ ಬೆಂಬಲವನ್ನು ಈಗ ಮರುಪರಿಶೀಲಿಸುವಂತೆ ಕಾಣುತ್ತಿದ್ದು, ಗಾಜಾದ ನಾಗರಿಕರ ಮೇಲೆ ಕಾಳಜಿ ವ್ಯಕ್ತಪಡಿಸುತ್ತಿವೆ. ಈ ಕದನ ಹೇಗೆ ಕೊನೆಗೊಳ್ಳುತ್ತದೆ, ಮತ್ತು ಅದಾದ ನಂತರದ ಪರಿಸ್ಥಿತಿ ಏನು ಎಂಬ ಕುರಿತು ಈಗ ಎಲ್ಲರ ಗಮನ ನೆಟ್ಟಿದೆ.


ಇದನ್ನೂ ಓದಿ- ಡಿಜಿಟಲ್ ಸಾಲ ಎಂಬ ಕರಾಳ ಜಾಲ: ಭಾರತವನ್ನು ಕಾಡುತ್ತಿರುವ ಆತಂಕಕಾರಿ ವಾಸ್ತವದ ಅನಾವರಣ


6. ಉಕ್ರೇನ್ ಯುದ್ಧದ ಭವಿಷ್ಯ:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವೂ ಸಹ ಭಾರತದ ನಿಲುವನ್ನು ಪರೀಕ್ಷೆಗೊಳಪಡಿಸಿದೆ. ರಷ್ಯಾದಿಂದ ತೈಲ ಖರೀದಿ ನಡೆಸಿರುವುದು ಭಾರತಕ್ಕೆ ಸ್ಥಳೀಯ ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು ನೆರವಾಗಿದೆ. ಅದರಲ್ಲೂ ಚುನಾವಣೆ ಸನಿಹದಲ್ಲಿರುವಾಗ ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಆದರೆ ಅಮೆರಿಕಾದ ಒತ್ತಡದ ಕಾರಣದಿಂದ, ಭಾರತ ರಷ್ಯಾಗೆ ಸಂಪೂರ್ಣ ಕಾರ್ಯಾಚರಣಾ ಸ್ವಾತಂತ್ರ್ಯ ನೀಡಿಲ್ಲ. ಈ ವರ್ಷ ಎರಡನೆಯ ಬಾರಿಗೆ ಪ್ರತಿ ವರ್ಷವೂ ನಡೆಯುವ ಭಾರತ - ರಷ್ಯಾ ವಾರ್ಷಿಕ ಸಮಾವೇಶ ನೆರವೇರಲಿಲ್ಲ. ಮುಂದಿನ ಬಾರಿ ಭಾರತ - ರಷ್ಯಾ ಮಾತುಕತೆಗೆ ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮಾವೇಶ ವೇದಿಕೆಯಾಗುವ ಸಾಧ್ಯತೆಗಳಿವೆ. ಇದೇ ಸಮಯದಲ್ಲಿ ಉಕ್ರೇನ್ ಯುದ್ಧ ಮುಂದುವರಿದಿದ್ದು, ಇದರ ಮಧ್ಯದಲ್ಲಿ ಶಾಂತಿ ಒಪ್ಪಂದ ಜಾರಿಗೆ ತರುವುದು ಬಹಳಷ್ಟು ಕಷ್ಟಕರವಾಗುವಂತೆ ತೋರುತ್ತಿದೆ.


7. ಪಾಶ್ಚಾತ್ಯ ರಾಷ್ಟ್ರಗಳೊಡನೆ ವ್ಯಾಪಾರ ಒಪ್ಪಂದಗಳು, ತಂತ್ರಜ್ಞಾನ ಸಹಯೋಗ:
ಯುನೈಟೆಡ್ ಕಿಂಗ್‌ಡಮ್ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಬಹುತೇಕ ಮಹತ್ವದ ಹಂತ ತಲುಪಿದೆ. ಐರೋಪ್ಯ ಒಕ್ಕೂಟದ ಸಂಸತ್ತಿನ ಚುನಾವಣೆ ಮತ್ತು ಯುಕೆಯಲ್ಲಿ ಮುಂದಿನ ವರ್ಷ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಸಂಧಾನಕಾರರಿಗೆ ತಮ್ಮ ಪ್ರಯತ್ನಗಳನ್ನು ನಡೆಸಲು ಹೆಚ್ಚು ಅವಕಾಶಗಳು ಲಭ್ಯವಾಗಿಲ್ಲ. ಇದೆಲ್ಲದರ ಹೊರತಾಗಿಯೂ, 2024ರ ವೇಳೆಗೆ ಈ ಮಹತ್ವದ ಆರ್ಥಿಕ ರಾಜತಾಂತ್ರಿಕ ಪ್ರಯತ್ನಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ.


ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟಗಳ ಜೊತೆಗೆ ತಂತ್ರಜ್ಞಾನ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆಗಳು ಭಾರತಕ್ಕೆ ನೆರವಾಗುವ ಉದ್ದೇಶ ಹೊಂದಿವೆ. ಆ ಮೂಲಕ ಭಾರತಕ್ಕೆ ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗನ್ನು ಪಡೆಯುವುದು ಸುಲಭವಾಗುವ ನಿರೀಕ್ಷೆಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.