ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ಆಕ್ರೋಶಗೊಂಡಿದ್ದು, ಈ ಹಿಂದೆ ಪಾಕಿಸ್ತಾನಕ್ಕೆ ನೀಡಲಾಗಿದ್ದ 'ಅತಿ ಆಪ್ತ ದೇಶ' (Most Favoured Nation-MFN)ಸ್ಥಾನಮಾನವನ್ನು ಭಾರತ ಹಿಂಪಡೆದಿದೆ.


COMMERCIAL BREAK
SCROLL TO CONTINUE READING

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನಿವಾಸದಲ್ಲಿ ನಡೆದ ತುರ್ತು ಸಭೆ ಬಳಿಕ ಸುದ್ದಿಗಾರರರಿಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಅಸ್ತ್ರ ಪ್ರಯೋಗಿಸಲಾಗಿದ್ದು, ಪಾಕ್‌ಗೆ ನೀಡಲಾಗಿದ್ದ 'ಅತಿ ಆಪ್ತ ರಾಷ್ಟ್ರ' ಎಂಬ ಸ್ಥಾನಮಾನವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಹೀಗಾಗಿ ಪಾಕಿಸ್ತಾನವು ಭಾರತದಿಂದ ವ್ಯಾಪಾರ ವಹಿವಾಟುಗಳಲ್ಲಿ ಪಡೆದುಕೊಂಡಿದ್ದ ವಿನಾಯಿತಿ ಇನ್ನು ಮುಂದೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ಈ ದಾಳಿಯ ಹಿಂದೆ ಇರುವವರು ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದನೆಗೆ ಬೆಂಬಲ ನೀಡುವವರಿಗೂ ತಕ್ಕ ಶಾಸ್ತಿ ಆಗಲಿದೆ. ಅಷ್ಟೇ ಅಲ್ಲದೆ,  ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಗೊಳಿಸುವ ಎಲ್ಲ ಪ್ರಯತ್ನ ಮಾಡಲಾಗುವುದು ಮತ್ತು ಭಯೋತ್ಪಾದಕ ದೇಶ ಎಂದು ಘೋಷಿಸುವಂತೆ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲಾಗುವುದು ಎಂದು ಜೇಟ್ಲಿ ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಎನ್ಎಸ್ಎ ಅಜಿತ್ ದೊವಲ್ ಸೇರಿದಂತೆ ಇತರರು ಹಾಜರಿದ್ದರು.



1996ರಲ್ಲಿ ಭಾರತವು ಪಾಕಿಸ್ತಾನಕ್ಕೆ 'ಅತಿ ಆಪ್ತ ರಾಷ್ಟ್ರ' ಎಂಬ ಸ್ಥಾನಮಾನವನ್ನು ನೀಡಿ ಘೋಷಿಸಿತ್ತು. ಆದರೆ ಪಾಕಿಸ್ತಾನ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸದ್ಯ ಭಾರತ ಈ ಸ್ಥಾನಮಾನವನ್ನು ಹಿಂಪಡೆದಿರುವುದರಿಂದ ಪಾಕಿಸ್ತಾನದಿಂದ ಬರುವ ಸರಕುಗಳ ಮೇಲೆ ಯಾವುದೇ ವಿನಾಯಿತಿ ಇರುವುದಿಲ್ಲ.