ಹೆಚ್ಚಿನ ವ್ಯಾಪ್ತಿ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿ ಆವೃತ್ತಿಯ ಪರೀಕ್ಷಾ ಪ್ರಯೋಗ ನಡೆಸಿದ ಭಾರತೀಯ ವಾಯು ಸೇನೆ
ಗುರುವಾರ, ಡಿಸೆಂಬರ್ 29ರಂದು ಭಾರತೀಯ ವಾಯು ಸೇನೆ (ಐಎಎಫ್) ಹೆಚ್ಚಿನ ವ್ಯಾಪ್ತಿ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಆವೃತ್ತಿಯ ಪರೀಕ್ಷಾ ಪ್ರಯೋಗ ನಡೆಸಿತು. ಈ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ 400 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದರು.
ಗುರುವಾರ, ಡಿಸೆಂಬರ್ 29ರಂದು ಭಾರತೀಯ ವಾಯು ಸೇನೆ (ಐಎಎಫ್) ಹೆಚ್ಚಿನ ವ್ಯಾಪ್ತಿ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಆವೃತ್ತಿಯ ಪರೀಕ್ಷಾ ಪ್ರಯೋಗ ನಡೆಸಿತು. ಈ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿ 400 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದರು. ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಈ ಪರೀಕ್ಷಾ ಪ್ರಯೋಗವನ್ನು ಬಂಗಾಳ ಕೊಲ್ಲಿ ಪ್ರದೇಶದಲ್ಲಿ ನೆರವೇರಿಸಲಾಯಿತು. ಈ ಪರೀಕ್ಷೆಯ ಯಶಸ್ಸಿನ ಮೂಲಕ ಭಾರತೀಯ ವಾಯುಪಡೆ ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಿಕೊಂಡಿದ್ದು, ಇದರಿಂದಾಗಿ ಯುದ್ಧ ವಿಮಾನಗಳಿಂದ ಅತ್ಯಂತ ಕರಾರುವಾಕ್ಕಾಗಿ ನೆಲ, ಸಮುದ್ರಗಳ ಮೇಲೆ ಅತ್ಯಂತ ದೂರದಲ್ಲಿರುವ ಗುರಿಗಳ ಮೇಲೆ ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲೂ ದಾಳಿ ನಡೆಸಲು ಸಾಧ್ಯವಾಗುತ್ತದೆ. ಕ್ಷಿಪಣಿಯ ವ್ಯಾಪ್ತಿ ಹೆಚ್ಚಳವಾಗಿರುವುದರಿಂದ ಮತ್ತು ಸು-30 ಎಂಕೆಐ ಯುದ್ಧ ವಿಮಾನಗಳ ಅಧಿಕ ಸಾಮರ್ಥ್ಯದ ಕಾರಣದಿಂದ ಭಾರತೀಯ ವಾಯುಪಡೆಯ ಕಾರ್ಯತಂತ್ರದ ವ್ಯಾಪ್ತಿ ಹೆಚ್ಚಳವಾಯಿತು. ಇದರಿಂದಾಗಿ ಭವಿಷ್ಯದ ಯುದ್ಧರಂಗದಲ್ಲಿ ಭಾರತೀಯ ವಾಯುಪಡೆ ಹೆಚ್ಚಿನ ಶಕ್ತಿ ಪ್ರದರ್ಶಿಸಬಹುದು.
ಇದನ್ನೂ ಓದಿ : ಚಂದ್ರಬಾಬು ನಾಯ್ಡು ರೋಡ್‌ಶೋನಲ್ಲಿ ಭೀಕರ ಕಾಲ್ತುಳಿತ: 8 ಮಂದಿ ಸಾವು, ಹಲವರ ಸ್ಥಿತಿ ಗಂಭೀರ!
ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಬ್ರಹ್ಮೋಸ್ ಏರೋಸ್ಪೇಸ್ (ಬಿಎಪಿಎಲ್), ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಗಳ ಒಟ್ಟು ಪ್ರಯತ್ನದ ಪರಿಣಾಮವಾಗಿ ಈ ಪರೀಕ್ಷೆಯು ಯಶಸ್ವಿಯಾಗಿದೆ.
2017ರಲ್ಲಿ ಮೊದಲ ಬಾರಿಗೆ ಭಾರತ - ರಷ್ಯಾ ಜಂಟಿ ತಯಾರಿಯ ಬ್ರಹ್ಮೋಸ್ ವಾಯುಪಡೆ ಆವೃತ್ತಿಯ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಅದನ್ನು ಸು-30ಎಂಕೆಐ ಯುದ್ಧ ವಿಮಾನದ ಮೂಲಕ ಉಡಾಯಿಸಲಾಯಿತು. ಎರಡನೆಯ ಪ್ರಯೋಗ 2019ರಲ್ಲಿ ನಡೆಯಿತು. 2017ರಲ್ಲಿ ಮಾಧ್ಯಮಗಳು ಭಾರತೀಯ ವಾಯುಪಡೆ ಗಾಳಿಯಿಂದ ಸಮುದ್ರದ ಮೇಲೆನ ಗುರಿಯ ಮೇಲೆ ಉಡಾವಣೆಗೊಳಿಸಬಲ್ಲ ವರ್ಗದ ಕ್ಷಿಪಣಿಯನ್ನು ಪರೀಕ್ಷಾ ಪ್ರಯೋಗ ನಡೆಸಿದ ಮೊದಲ ವಾಯುಪಡೆ ಎಂದು ವರದಿ ಮಾಡಿದ್ದವು. ಈ ಕ್ಷಿಪಣಿ 2.8 ಮ್ಯಾಕ್ ವೇಗದಲ್ಲಿ ದಾಳಿ ನಡೆಸಬಲ್ಲದು.
ಸು-30 ಎಂಕೆಐಗೆ ಕ್ಷಿಪಣಿಯ ಜೋಡಣೆ
ಒಂದು ಆಯುಧವನ್ನು ಯುದ್ಧ ವಿಮಾನಕ್ಕೆ ಜೋಡಿಸುವುದು ಒಂದು ಸಂಕೀರ್ಣ ವಿಚಾರವಾಗಿದೆ. ಇದಕ್ಕಾಗಿ ಯುದ್ಧ ವಿಮಾನದಲ್ಲಿ ಸಾಫ್ಟ್‌ವೇರ್, ಇಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬದಲಾವಣೆಗಳನ್ನು ಮಾಡಬೇಕಾಗಿ ಬರುತ್ತದೆ. ಈ ಬದಲಾವಣೆಗಳನ್ನು ಸರಕಾರಿ ಸ್ವಾಮ್ಯದ ಎಚ್ಎಎಲ್ ನಡೆಸುತ್ತದೆ.
ಇದನ್ನೂ ಓದಿ : ರತನ್ ಟಾಟಾ: ಉದ್ಯಮ ಪ್ರಪಂಚದ ವಿನಮ್ರ ದೈತ್ಯ!
ಬ್ರಹ್ಮಪುತ್ರ ಮತ್ತು ಮಾಸ್ಕ್ವಾ ನದಿಗಳ ಹೆಸರಿನ ಸಂಯೋಗವಾದ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ರಷ್ಯಾದ ಮಷಿನೋಸ್ಟ್ರೋಯೆನ್ಯಾಗಳ ಜಂಟಿ ಸಹಯೋಗದ ಸಂಸ್ಥೆಯಾದ ಬ್ರಹ್ಮೋಸ್ ಏರೋಸ್ಪೇಸ್ ಕೈಗೊಳ್ಳುತ್ತದೆ. ಬ್ರಹ್ಮೋಸ್ ಕ್ಷಿಪಣಿಯ ಮೊದಲ ಆವೃತ್ತಿಯ ಪರೀಕ್ಷಾ ಪ್ರಯೋಗವನ್ನು 2001ರಲ್ಲಿ ನಡೆಸಲಾಗಿತ್ತು. ಬ್ರಹ್ಮೋಸ್ ಕ್ಷಿಪಣಿಯ ವಿವಿಧ ಆವೃತ್ತಿಗಳು, ಭೂಮಿಯಿಂದ ಉಡಾವಣೆಗೊಳಿಸಬಲ್ಲ ಆವೃತ್ತಿ, ಯುದ್ಧನೌಕೆಗಳಿಂದ ಉಡಾಯಿಸಬಲ್ಲ ಆವೃತ್ತಿ, ಸಬ್‌ಮರೀನ್ ಮತ್ತು ಸುಖೋಯಿ-30 ಯುದ್ಧ ವಿಮಾನದಿಂದ ಉಡಾಯಿಸಬಲ್ಲ ಆವೃತ್ತಿಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು, ಪ್ರಯೋಗಕ್ಕೊಳಪಡಿಸಿ, ಸೇವೆಗೆ ಸೇರ್ಪಡೆಗೊಳಿಸಲಾಗಿದೆ.
ಲೇಖಕರು : ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.