ಚಂದ್ರಬಾಬು ನಾಯ್ಡು ರೋಡ್‌ಶೋನಲ್ಲಿ ಭೀಕರ ಕಾಲ್ತುಳಿತ: 8 ಮಂದಿ ಸಾವು, ಹಲವರ ಸ್ಥಿತಿ ಗಂಭೀರ!

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಯೋಜಿಸಿದ್ದ ರೋಡ್ ಶೋನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿಸಿದೆ. ಇದರ ಪರಿಣಾಮ 8 ಮಂದಿ ಮೃತಪಟ್ಟಿದ್ದು, ಅನೇಕರಿಗೆ ಗಾಯಗಳಾಗಿವೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Written by - Puttaraj K Alur | Last Updated : Dec 29, 2022, 08:29 AM IST
  • ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಚಂದ್ರಬಾಬು ನಾಯ್ಡು ರೋಡ್‌ಶೋ ವೇಳೆ ದುರಂತ
  • ಭೀಕರ ಕಾಲ್ತುಳಿತಕ್ಕೆ ಮಹಿಳೆ ಸೇರಿ 8 ಮಂದಿ ಸಾವು, ಹಲವರ ಸ್ಥಿತಿ ಗಂಭೀರ
  • ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಪರಿಹಾರ ಘೋಷಿಸಿದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು ರೋಡ್‌ಶೋನಲ್ಲಿ ಭೀಕರ ಕಾಲ್ತುಳಿತ: 8 ಮಂದಿ ಸಾವು, ಹಲವರ ಸ್ಥಿತಿ ಗಂಭೀರ! title=
ಕಾಲ್ತುಳಿತಕ್ಕೆ 8 ಮಂದಿ ಬಲಿ!

ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬುಧವಾರ ಚಂದ್ರಬಾಬು ನಾಯ್ಡು ಅವರ ರೋಡ್‌ಶೋನಲ್ಲಿ ಕಾಲ್ತುಳಿತಕ್ಕೆ ಮಹಿಳೆ ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಚಂದ್ರಬಾಬು ನಾಯ್ದುಗೆ ಆರಂಭದಲ್ಲಿಯೇ ದೊಡ್ಡ ವಿಘ್ನ ಎದುರಾಗಿದೆ.

ನೆಲ್ಲೂರು ಜಿಲ್ಲೆಯ ಪಮೂರು ಎನ್‌ಟಿಆರ್ ಸರ್ಕಲ್‌ನಲ್ಲಿ ನಾಯ್ಡು ಅವರ ಬೆಂಗಾವಲು ಪಡೆ ತೆರಳುತ್ತಿದ್ದ ವೇಳೆ ಕಾಲ್ತುಳಿತ ಸಂಭವಸಿದೆ. ರೋಡ್‌ಶೋದಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದ ಕಾರಣ ಕಾಲ್ತುಳಿತ ಉಂಟಾಗಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: COVID-19 Update: ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ತಜ್ಞರ ವಾರ್ನಿಂಗ್!

ಕಂಡಕೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡುರವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರು ಭಾಷಣ ಆರಂಭಿಸುವ ಮೊದಲೇ ಕಾಲ್ತುಳಿತ ಸಂಭವಿಸಿದೆ. ಕಿಕ್ಕಿರಿದು ತುಂಬಿದ್ದ ಜನಸಾಗರ ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಘಟನೆಯಲ್ಲಿ ಸಾವನ್ನಪ್ಪಿದವರೆಲ್ಲರೂ ಟಿಡಿಪಿ ಕಾರ್ಯಕರ್ತರು ಅಂತಾ ತಿಳಿದುಬಂದಿದೆ. ಈ ದುರ್ಘಟನೆಯಿಂದ ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟುಕುಗೊಳಿಸಿದ ಚಂದ್ರಬಾಬು ನಾಯ್ಡು ಆಸ್ಪತ್ರೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಪರಿಹಾರ ಘೋಷಿಸಿದರು.

ರೋಡ್ ಶೋ ವೇಳೆ ಉಸಿರುಗಟ್ಟುವಿಕೆಯಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಟಿಡಿಪಿ ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ. ಕಾಲ್ತುಳಿತದಿಂದ ಬಚಾವ್ ಆಗಲು ಹಲವರು ತೆರೆದ ಚರಂಡಿಗೆ ಬಿದ್ದಿದ್ದಾರೆ. 

ಇದನ್ನೂ ಓದಿ: Modi Mother Health : ಹೀರಾಬೆನ್ ಮೋದಿ ಆಸ್ಪತ್ರೆಗೆ ದಾಖಲು.. ಅಮ್ಮನನ್ನು ನೋಡಲು ಆಸ್ಪತ್ರೆ ಬಂದ ಪ್ರಧಾನಿ ಮೋದಿ 

‘ಈ ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಮೃತರ ಕುಟುಂಬಸ್ಥರ ಜೊತೆಗೆ ನಿಲ್ಲುತ್ತೇನೆ. ಅವರಿಗೆ ಎಲ್ಲಾ ನೆರವು ನೀಡುತ್ತೇನೆ. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ನನ್ನದು. ಗಾಯಗೊಂಡವರಿಗೂ ನೆರವು ನೀಡುತ್ತೇನೆ’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News