ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ.ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ, ಬಂಧನ ಸಾಧ್ಯತೆ
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕಳೆದ ಜನವರಿ 25ರಂದು ಮುಂದೂಡಲಾಗಿದ್ದ ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಸುನಿಲ್ ಗೌರ್ ಅವರು ಮಂಗಳವಾರದಂದು ಈ ತೀರ್ಪನ್ನು ನೀಡಿದ್ದು, ಸಿಬಿಐ ಹಾಗೂ ಇಡಿ ಪ್ರಕರಣಗಳಿಗೆ ಸಂಬಂಧಿಸಿದ ದೂರನ್ನು ವಜಾಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
2007 ರಲ್ಲಿ, ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಐಎನ್‌ಎಕ್ಸ್ ಮೀಡಿಯಾಕ್ಕೆ 305 ಕೋಟಿ ರೂ.ಗೆ ನೀಡಿದ್ದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಕೇಂದ್ರ ತನಿಖಾ ದಳ ಎಫ್‌ಐಆರ್ ದಾಖಲಿಸಿತ್ತು.
ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಚಿದಂಬರಂ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.
ಈ ಎರಡೂ ಪ್ರಕರಣಗಳಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಅವರ ಹೆಸರೂ ಸಹ ಇದ್ದು, ಅವರನ್ನು ಫೆಬ್ರವರಿ 28, 2018 ರಂದು ಸಿಬಿಐ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಕಾರ್ತಿ ಚಿದಂಬರಂ ಅವರಿಗೆ ಸೇರಿದ ಆಸ್ತಿಯನ್ನೂ ಸಹ ಇಡಿ ಮುಟ್ಟುಗೋಲುಹಾಕಿಕೊಂಡಿದೆ.
ಇದೀಗ ಈ ತೀರ್ಪನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು, ಚಿದಂಬರಂ ನಿರೀಕ್ಷಣಾ ಜಾಮೀನಿನ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ.