ನಿಮ್ಮ ರೈಲ್ವೆ ಟಿಕೆಟ್ ಅನ್ನು ಬೇರೊಬ್ಬರಿಗೆ ವರ್ಗಾಯಿಸಬಹುದು, ಹೇಗೆ ಗೊತ್ತಾ?
ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದ್ರೆ ಅದನ್ನು ಬೇರೆಯವರಿಗೆ ಟ್ರಾನ್ಸ್ ಫರ್ ಮಾಡಲು ಇಲಾಖೆ ಅವಕಾಶ ಕಲ್ಪಿಸಿದೆ. ಟಿಕೆಟ್ ವರ್ಗಾವಣೆ ಪ್ರಕ್ರಿಯೆಯು ಪ್ರಯಾಣದ ಕನಿಷ್ಟ 24 ಗಂಟೆಗಳ ಮುಂಚಿತವಾಗಿ ಪೂರ್ಣಗೊಳ್ಳಬೇಕು.
ನವದೆಹಲಿ: ನೀವು IRCTC (ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ) ನ ವೆಬ್ಸೈಟ್ನಲ್ಲಿ ಆನ್ಲೈನ್ ಟಿಕೆಟ್ ಅನ್ನು ಕಾಯ್ದಿರಿಸುತ್ತೀರಲ್ಲವೇ? ಕೆಲವೊಮ್ಮೆ ಟಿಕೆಟ್ ಬುಕಿಂಗ್, ಕನ್ಫರ್ಮ್ ಎಲ್ಲಾ ಆದ ಬಳಿಕ ನಿಮ್ಮ ಪ್ಲಾನ್ ಬದಲಾಗಬಹುದು. ಅಂತಹ ಸಮಯದಲ್ಲಿ ನೀವು ರೈಲ್ವೆ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡುವ ಬದಲಿಗೆ ನೀವು ಬುಕ್ಕಿಂಗ್ ಮಾಡಿರೋ ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದ್ರೆ ಅದನ್ನು ಬೇರೆಯವರಿಗೆ ಟ್ರಾನ್ಸ್ ಫರ್ ಮಾಡಲು ಇಲಾಖೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಕೆಲವೊಂದು ನಿಯಮಗಳನ್ನು ಕೂಡ ಜಾರಿ ಮಾಡಿದೆ.
ಟಿಕೆಟ್ ಅನ್ನು ರದ್ದುಪಡಿಸುವುದರ ಬದಲಾಗಿ ನೀವು ಟಿಕೆಟ್ ಅನ್ನು ಹೇಗೆ ವರ್ಗಾವಣೆ ಮಾಡಬಹುದೆಂದು ಎಂದು ನಾವು ನಿಮಗೆ ಹೇಳುತ್ತೇವೆ. ಆದಾಗ್ಯೂ, ಈ ವೈಶಿಷ್ಟ್ಯವನ್ನು ಒಮ್ಮೆ ಮಾತ್ರ ಬಳಸಬಹುದಾಗಿದೆ.
ಟಿಕೆಟ್ ವರ್ಗಾವಣೆ ಮಾಡಲು ಹೀಗೆ ಮಾಡಿ...
ಮೊದಲಿಗೆ ನಿಮ್ಮ ಟಿಕೆಟ್ ಪ್ರಿಂಟ್ ಔಟ್ ತೆಗೆದುಕೊಳ್ಳಿ, ಜೊತೆಗೆ ನಿಮ್ಮ ಟಿಕೆಟ್ ನಲ್ಲಿ ಪ್ರಯಾಣಿಸ ಬಯಸುತ್ತಿರುವ ವ್ಯಕ್ತಿಯ ಐಡಿ ಪುರಾವೆಗಳನ್ನು ತೆಗೆದುಕೊಳ್ಳಿ. ಅದರೊಂದಿಗೆ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಿ ಎರಡನ್ನೂ ಕೌಂಟರ್ ಅಧಿಕಾರಿಗೆ ನೀಡಿ ಟಿಕೆಟ್ ವರ್ಗಾಯಿಸಲು ಕೇಳಿ. ಈ ಸೇವೆಯನ್ನು IRCTC ಯ ಹೊಸ ನಿಯಮಗಳಲ್ಲಿ ಕಲ್ಪಿಸಲಾಗಿದೆ.
ನಿಮ್ಮ ಹೆಸರಲ್ಲಿ ಬುಕ್ಕಿಂಗ್ ಆಗಿರುವ ಟಿಕೆಟ್ ಅನ್ನು ಕುಟುಂಬ ಸದಸ್ಯರಾದ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಪತಿ ಮತ್ತು ಪತ್ನಿಯ ಹೆಸರಿಗೆ ವರ್ಗಾಯಿಸಲು ಅವಕಾಶವಿದೆ. ಹೇಗಾದರೂ, ಕೌಂಟರ್ ಅಧಿಕಾರಿಯು ನಿಮ್ಮ ಹಾಗೂ ಟಿಕೆಟ್(ವರ್ಗಾವಣೆಯ ಟಿಕೆಟ್) ಪಡೆಯುವ ವ್ಯಕ್ತಿಯ ನಡುವಿನ ಸಂಬಂಧ ಪುರಾವೆಯನ್ನು ಕೇಳುತ್ತಾರೆ. ಆ ಪುರಾವೆಗಳನ್ನು ಒದಗಿಸಿದರೆ ನಿಮ್ಮ ಟಿಕೆಟ್ ಅನ್ನು ಆ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಲಾಗುತ್ತದೆ. ಟಿಕೆಟ್ ವರ್ಗಾವಣೆ ಪ್ರಕ್ರಿಯೆಯು ಪ್ರಯಾಣದ ಕನಿಷ್ಟ 24 ಗಂಟೆಗಳ ಮುಂಚಿತವಾಗಿ ಪೂರ್ಣಗೊಳ್ಳಬೇಕು.
ನೆನಪಿಡಿ: ಕುಟುಂಬದ ಸದಸ್ಯರಿಗಷ್ಟೇ ಟಿಕೆಟ್ ವರ್ಗಾಯಿಸಲು ಅವಕಾಶವಿದ್ದು, ಸ್ನೇಹಿತರು ಅಥವಾ ಬೇರೆಯವರಿಗೆ ಟಿಕೆಟ್ ವರ್ಗಾಯಿಸಲಾಗುವುದಿಲ್ಲ.