ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ್ -2 ಅನ್ನು ಮಂಗಳವಾರ ಬೆಳಿಗ್ಗೆ ಚಂದ್ರನ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಮಾಹಿತಿಯ ಪ್ರಕಾರ, ಮಂಗಳವಾರ ಬೆಳಿಗ್ಗೆ 9.02 ಕ್ಕೆ ಚಂದ್ರನ ಕಕ್ಷೆ ಅಳವಡಿಕೆ (ಎಲ್‌ಒಐ) ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರಯಾನ್ -2 ರ ಎಲ್ಲಾ ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್, ಭಾರತೀಯರ ಪಾಲಿಗೆ ಇದೊಂದು ವಿಶೇಷವಾದ ದಿನ. ಜಿಎಸ್​ಎಲ್​ವಿ-MkIII-M1 ರಾಕೆಟ್ ನಭಕ್ಕೆ ಜುಲೈ 22ರಂದು ಗಗನಕ್ಕೆ ಹಾರಿತ್ತು. ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ಪೂರ್ಣಗೊಂಡಿದೆ. ಚಂದ್ರನ ಅಂಗಳಕ್ಕೆ ತಲುಪಲು ಇನ್ನೂ ನಾಲ್ಕು ಕಾರ್ಯಾಚರಣೆ ನಡೆಯಬೇಕಿದೆ. ಸೆಪ್ಟೆಂಬರ್​ 7ರಂದು ಚಂದ್ರನ ಅಂಗಳಕ್ಕೆ ಈ ಉಪಗ್ರಹ ತಲುಪಲಿದೆ ಎಂದು ತಿಳಿಸಿದ್ದಾರೆ.


ಚಂದ್ರಯಾನ್ -2 ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ತಲುಪಿದೆ. ಇಂದಿನಿಂದ ಈ ನೌಕೆಯು ಚಂದ್ರನ ಕಕ್ಷೆಯನ್ನು ಪ್ರದಕ್ಷಿಣೆ ಹಾಕಲಿದೆ. ಸೆ. 2ರಂದು ಮುಂದಿನ ಮಹತ್ವದ ಘಟ್ಟದ ಕಾರ್ಯ ನಡೆಯಲಿದೆ. ಅಂದು ವಿಕ್ರಮ್ ಲ್ಯಾಂಡರ್ ನೌಕೆಯಿಂದ ಬೇರ್ಪಡಲಿದೆ. ಸೆ. 3ರಂದು ನಾವು ಮೂರು ಸೆಕೆಂಡುಗಳ ಕಾಲ ಸಣ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿದ್ದು, ಲ್ಯಾಂಡರ್‌ನ ವ್ಯವಸ್ಥೆ ಸಹಜವಾಗಿ ನಡೆಯುತ್ತಿದೆಯೇ ಎಂಬುದನ್ನುಪರಿಶೀಲಿಸಲಿದ್ದೇವೆ. ಸೆಪ್ಟೆಂಬರ್ 7 ರಂದು ರಾತ್ರಿ 1:55 ಕ್ಕೆ ಚಂದ್ರಯಾನ-2 ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂದು ಶಿವನ್ ಹೇಳಿದ್ದಾರೆ.