ನವದೆಹಲಿ:ಭಾರತದ ಮಹತ್ವಾಕಾಂಕ್ಷೆಯ ಮಿಶನ್ ಚಂದ್ರಯಾನ್-2 ರ ವಿಕ್ರಮ್ ಲ್ಯಾಂಡರ್ ಅನ್ನು ನಾವು ಪತ್ತೆಹಚ್ಚಿರುವುದಾಗಿ ಹೇಳಿಕೊಂಡ ಅಮೇರಿಕದ ಬಾಹ್ಯಾಕಾಶ ಸಂಸ್ಥೆ(NASA)ಗೆ ಇಸ್ರೋ ತಿರುಗೇಟು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಕೆ. ಶಿವನ್, ವಿಕ್ರಮ್ ಲ್ಯಾಂಡರ್ ಅನ್ನು ನಮ್ಮದೇ ಆದ ಮೂನ್ ಆರ್ಬಿಟರ್ ಪತ್ತೆಹಚ್ಚಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ವಿಷಯವನ್ನು ಈಗಾಗಲೇ ನಮ್ಮ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಬೇಕಾದರೆ ಪರಿಶೀಲಿಸಬಹುದು ಎಂದಿದ್ದಾರೆ.


COMMERCIAL BREAK
SCROLL TO CONTINUE READING

ರಾಜಸ್ಥಾನದ ಕಿಶನಘರ್ ನಲ್ಲಿ ನಡೆದ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ನಾವು ಈ ಕುರಿತು ಹೆಚ್ಚಿಗೆ ಹೇಳಲು ಬಯಸುವುದಿಲ್ಲ. ಲ್ಯಾಂಡಿಂಗ್ ದಿನಾಂಕದ ನಂತರ, ನಮ್ಮದೇ ಆದ ಮೂನ್ ಆರ್ಬಿಟರ್ ವಿಕ್ರಮ್ ಅನ್ನು ಪತ್ತೆಹಚ್ಚಿರುವ ಬಗ್ಗೆ ಸೆಪ್ಟೆಂಬರ್ 10 ರಂದು ನಮ್ಮ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ವಿಕ್ರಮ್ ಜೊತೆ ಸಂಪರ್ಕ ಸಾಧಿಸಲು ಬೇಕಾದ ಎಲ್ಲ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ" ಎಂದಿದ್ದಾರೆ. ಈ ಹಿಂದೆಯೂ ಕೂಡ ವಿಕ್ರಮ್ ಕುರಿತು ಮಾಹಿತಿ ನೀಡಿದ್ದ ಕೆ. ಶಿವನ್, ವಿಕ್ರಮ್ "ಹಾರ್ಡ್ ಲ್ಯಾಂಡಿಂಗ್" ಮಾಡಿದ್ದಾನೆ ಮತ್ತು ಆರ್ಬಿಟರ್ ಲ್ಯಾಂಡರ್ ನ ಉಷ್ಣ ಚಿತ್ರಗಳನ್ನು ಕ್ಲಿಕ್ಕಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದರು.


ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಹೇಳಿಕೆ ನೀಡಿದ್ದ ನಾಸಾ, ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆಹಚ್ಚಲಾಗಿದ್ದು ಇದಕ್ಕೆ ಭಾರತದ ಚೆನ್ನೈ ಮೂಲದ ಯುವ ವಿಜ್ಞಾನಿ ಷಣ್ಮುಗ ಸುಬ್ರಮಣಿಯನ್ ನೆರವು ನೀಡಿದ್ದರು ಎಂದಿತ್ತು . ಜೊತೆಗೆ ನಾಸಾ ತನ್ನ ಲೂನಾರ್ ರೆಕೊನಾಯ್ಸೆನ್ಸಸ್ ಮೂಲಕ ತೆಗೆದ ಚಿತ್ರಗಳನ್ನು ಸಹ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿತ್ತು.