ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಯ 32 ಸದಸ್ಯರ ತಂಡವು ಭಾನುವಾರ ನಂದಾ ದೇವಿ ಪೂರ್ವ ಶಿಖರದ ಬಳಿ ಏಳು ಪರ್ವತಾರೋಹಿಗಳ ಶವಗಳನ್ನು ಪತ್ತೆ ಮಾಡಿದೆ. ಶವಗಳು ಪತ್ತೆಯಾದ ಪ್ರದೇಶದಲ್ಲಿ ಪರ್ವತಾರೋಹಿಗಳು ಬಳಸುತ್ತಿದ್ದ ಕೆಲವು ಸಾಮಾನುಗಳು ಸಹ ಪತ್ತೆಯಾಗಿವೆ ಎಂದು ಐಟಿಬಿಪಿ ತಂಡ ತಿಳಿಸಿದೆ. 


COMMERCIAL BREAK
SCROLL TO CONTINUE READING

"ಐಟಿಬಿಪಿ ತಂಡವು ಭಾನುವಾರ ಏಳು ಪರ್ವತಾರೋಹಿಗಳ ಶವಗಳನ್ನು ನಂದಾದೇವಿ ಪೂರ್ವ ಪರ್ವತದ ಬಳಿ ಪತ್ತೆಯಚ್ಚಿದ್ದು,  7 ಮಂದಿಯ ಪೈಕಿ ಓರ್ವ ಭಾರತೀಯ ಪರ್ವತಾರೋಹಿ ಮತ್ತು ಓರ್ವ ಮಹಿಳೆ ಸೇರಿದ್ದಾರೆ ಎಂದು ಐಟಿಬಿಪಿ ಟ್ವೀಟ್ ನಲ್ಲಿ ತಿಳಿಸಿದೆ. ನಾಪತ್ತೆಯಾದ 8 ನೇ ಪರ್ವತಾರೋಹಿಗಾಗಿ ಸೋಮವಾರ ಶೋಧ ಕಾರ್ಯ ಮುಂದುವರೆಯಲಿದೆ" ಎಂದು ಐಟಿಬಿಪಿ ತನ್ನ ಟ್ವೀಟ್ ಮೂಲಕ ತಿಳಿಸಿದೆ.



ಪ್ರಸಿದ್ಧ ಬ್ರಿಟಿಷ್ ಪರ್ವತಾರೋಹಿ ಮಾರ್ಟಿನ್ ಮೊರನ್ ನೇತೃತ್ವದಲ್ಲಿ,  8 ಪರ್ವಾತರೋಹಿಗಳ ತಂಡವು ಇತ್ತೀಚೆಗೆ ಉತ್ತರಾಖಂಡದ  ಪಿತೋರ್‌ಗಡದ 7434 ಮೀಟರ್ ಎತ್ತರದ ನಂದಾ ದೇವಿ ಪೂರ್ವ ಶಿಖರದಲ್ಲಿ ನಾಪತ್ತೆಯಾಗಿದ್ದರು. ಎಂಟು ಪರ್ವತಾರೋಹಿಗಳು ಮೇ 13 ರಂದು ಮುನ್ಸಿಯಾರಿಯಿಂದ ಹೊರಟಿದ್ದರು. ಆದರೆ ಮೇ 25 ರ ನಿಗದಿತ ದಿನಾಂಕದಂದು ಅವರು ಬೇಸ್ ಕ್ಯಾಂಪ್‌ಗೆ ಮರಳುವ ಸಂದರ್ಭದಲ್ಲಿ ಹಠಾತ್ ಹಿಮಪಾತಕ್ಕೆ ಬಲಿಯಾಗಿರಬಹುದು ಎಂದು ನಂಬಲಾಗಿದೆ. ಒಂದು ವಾರದ ಹಿಂದೆ ಹಿಮಾಲಯದಲ್ಲಿ ಕಾಣೆಯಾದ ಎಂಟು ಪರ್ವತಾರೋಹಿಗಳನ್ನು ಹುಡುಕಲು ಪ್ರಾರಂಭಿಸಲಾಯಿತು.


ಜೂನ್ 13 ರಂದು ಕಾಣೆಯಾದ ಪರ್ವತಾರೋಹಿಗಳ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. 'ಡೇರ್‌ಡೆವಿಲ್' ಹೆಸರಿನ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಏಳು ಶವಗಳನ್ನು ಪತ್ತೆ ಹಚ್ಚಲಾಗಿದೆ.  ಭಾನುವಾರ ಪತ್ತೆ ಹಚ್ಚಲಾದ ಶವಗಳನ್ನು 17,800 ಅಡಿ ಎತ್ತರದಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಶಿಬಿರದಲ್ಲಿ  ಇರಿಸಲಾಗಿದ್ದು, ಸೋಮವಾರ ಹೆಲಿಕ್ಯಾಪ್ಟರ್‌ ಮೂಲಕ ಬೇಸ್‌ ಕ್ಯಾಂಪ್‌ಗೆ ತರಲಾಗುತ್ತಿದೆ ಎಂದು ಐಟಿಬಿಪಿ ಡಿಐಜಿ ಎ ಪಿ ಡಿ ನಿಂಬಾಡಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.