ಕೋಲ್ಕತ್ತಾ:  ಜೈಲಿನಲ್ಲಿ ಅಧಿಕಾರಿಗಳು ನನಗೆ ಕಿರುಕುಳ ನೀಡಿದರು, ಬಲವಂತವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದರು ಎಂದು ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಫೋಟೋ ಟ್ರೋಲ್​ ಮಾಡಿ ಬಂಧನಕ್ಕೊಳಗಾಗಿದ್ದ  ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಆದೇಶದ 18 ಗಂಟೆಗಳ ಬಳಿಕ ಇಂದು ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನನಗೆ ಜೈಲಿನಲ್ಲಿ ಕಿರುಕುಳ ನೀಡಿದರು, ಕರೆ ಮಾಡಲು ಬಿಡುತ್ತಿರಲಿಲ್ಲ. ಸುಪ್ರೀಂ ಕೋರ್ಟ್​ ಆದೇಶದ ಹೊರತಾಗಿಯೂ 18 ಗಂಟೆ ಜೈಲಿನಲ್ಲಿರಿಸಿದ್ದಾರೆ. ಜೈಲಿನೊಳಗೆ ಸರಿಯಾಗಿ ನೀರೇ ಇರಲಿಲ್ಲ, ಸ್ವಚ್ಛತೆಯೂ ಇರಲಿಲ್ಲ ಎಂದು ಆರೋಪಿಸಿದರು.


ಮುಂದುವರೆದು ಮಾತನಾಡುತ್ತಾ, "ನಾನು ಬಿಜೆಪಿಯವಳು ಎಂಬ ಕಾರಣಕ್ಕೆ ಕ್ಷಮೆ ಕೇಳಬೇಕು ಎನ್ನುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಮೊದಲಿಗೆ ಕ್ಷಮಾಪಣಾ ಪತ್ರ ಬರೆದುಕೊಡಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಬಳಿಕ ಆ ಷರತ್ತನ್ನು ಮಾರ್ಪಡಿಸಿ, ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಕೋರ್ಟ್  ಹೇಳಿತ್ತಾದರೂ ನನ್ನಿಂದ ಬಲವಂತವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡು ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದರು.


ಏತನ್ಮಧ್ಯೆ, ಮಾತನಾಡಿದ ಪ್ರಿಯಾಂಕಾ ಪರ ವಕೀಲ, ಪ್ರಿಯಾಂಕಾ ಅವರಿಂದ ಬಲವಂತವಾಗಿ ಕ್ಷಮಾಪಣಾ ಪತ್ರ ಬರೆಸಿಕೊಂಡು ಕೋರ್ಟ್​ ಆದೇಶವನ್ನು ಉಲ್ಲಂಘಿಸಿದ್ದಾರೆ. ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಾವು ಈ ಪ್ರಕರಣದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.