ಶ್ರೀನಗರ: ಮುಂದಿನ 3-4 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಮಾದರಿಯಲ್ಲೇ ಅದಕ್ಕಿಂತಲೂ ದೊಡ್ಡ ಮಟ್ಟದ ದಾಳಿ ನಡೆಸಲು ಜೈಶ್-ಎ- ಮೊಹಮ್ಮದ್(JeM) ಭಯೋತ್ಪಾದನಾ ಸಂಘಟನೆ ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿದೆ.


COMMERCIAL BREAK
SCROLL TO CONTINUE READING

ಗುಪ್ತಚರ ಏಜೆನ್ಸಿಗಳು ಸ್ವೀಕರಿಸಿದ ಮಾಹಿತಿಗಳ ಪ್ರಕಾರ, ನಿಷೇಧಿತ ಭಯೋತ್ಪಾದನಾ ಸಂಘಟನೆಯು ಪಾಕಿಸ್ತಾನದ ಬಾಲಾಕೋಟ್ನಲ್ಲಿನ ಐಎಎಫ್ ನಡೆಸಿದ ದಾಳಿಗೆ ಸೇಡು ತೀರಿಸಿಕೊಳ್ಳಲು 'ಸದ್ಯದಲ್ಲೇ' ಮತ್ತೊಂದು ಅನಾಹುತಕಾರಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.


ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಭದ್ರತಾ ಏಜೆನ್ಸಿಗಳು ಹೆಚ್ಚಿನ ಎಚ್ಚರಿಕೆಯಿಂದಿರಲು ನಿರ್ದೇಶಿಸಲಾಗಿದೆ.


ಗುಪ್ತಚರ ಮಾಹಿತಿಗಳ ಪ್ರಕಾರ, ಮಸೂದ್ ಅಝರ್ ನೇತೃತ್ವದ ಜೆಇಎಂ ದಕ್ಷಿಣ ಕಾಶ್ಮೀರದ ಖಾಜಿಗುಂಡ್ ಮತ್ತು ಅನಂತ್ನಾಗ್ನಲ್ಲಿ ಐಎಡಿ ದಾಳಿಯನ್ನು ಕೈಗೊಳ್ಳಲು ಯೋಜಿಸಿದೆ.


ಈ ಸಮಯದಲ್ಲಿ, JeM ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು "ಟಾಟಾ ಸುಮೋ ಎಸ್ಯುವಿ" ಅನ್ನು ಬಳಸಲು ಯೋಜಿಸಿದೆ.


ನಿನ್ನೆಯಷ್ಟೇ ಜಮ್ಮುವಿನ ಬಸ್ ನಿಲ್ದಾಣದಲ್ಲಿ ಗ್ರೆನೇಡ್ ದಾಳಿ ನಡೆದಿದೆ. ಇದಾದ ಕೆಲ ಹೊತ್ತಿನಲ್ಲೇ ಗುಪ್ತಚರ ಇಲಾಖೆ ಈ ಎಚ್ಚರಿಕೆಯ ಸಂದೇಶ ನೀಡಿದೆ. 


ಕಳೆದ ವರ್ಷದ ಮೇನಿಂದಾಚೆಗೆ ಜಮ್ಮು ಬಸ್ ನಿಲ್ದಾಣದಲ್ಲಿ ಉಗ್ರರು ನಡೆಸಿರುವ ಮೂರನೇಯ ಗ್ರೆನೇಡ್ ಸ್ಪೋಟ ಇದಾಗಿದೆ.ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತರುವಂತಹ  ನಿಟ್ಟಿನಲ್ಲಿ ಈ ಸ್ಪೋಟ ನಡೆಸಿರುವ ಸಾಧ್ಯತೆ ಎಂಬುದು  ತಿಳಿದುಬಂದಿದೆ.


ಹಿಜ್ಬುಲ್ ಮುಜಾಹಿದ್ದೀನ್  ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಯಾಸಿನ್ ಜಾವಿದ್ ಭಟ್ ಬಂಧಿತ ಆರೋಪಿಯಾಗಿದ್ದು, ಈತನನ್ನು ನಾಗೊರ್ತಾ ಬಳಿಯ ಟೋಲ್  ಪ್ಲಾಜಾ ಬಳಿ ಬಂಧಿಸಲಾಗಿದೆ.


ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲ ಸಾಕ್ಷ್ಯಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು  ಜಮ್ಮು-ಕಾಶ್ಮೀರ ಐಜಿಪಿ ಎಂ.ಕೆ.ಸಿನ್ಹಾ ತಿಳಿಸಿದ್ದಾರೆ.