ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಬಳಿ ಇರುವ ನೌಗಾಮ್ ಸೆಕ್ಟರ್ ಬಳಿ ಉಗ್ರರು ಮತ್ತೊಮ್ಮೆ ಭದ್ರತಾಪಡೆಗಳನ್ನು ಗುರಿಯಾಗಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಶ್ರೀನಗರದ ಹೊರವಲಯದಲ್ಲಿರುವ ಬೈಪಾಸ್ ಬಳಿ ಪೊಲೀಸ್ ಪಾರ್ಟಿ ಮೇಲೆ ಉಗ್ರರು ದಾಳಿ(Terror Attack) ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಹುತಾತ್ಮರಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಉಗ್ರ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ.


COMMERCIAL BREAK
SCROLL TO CONTINUE READING

ಕಳೆದ ಹಲವು ದಿನಗಳಿಂದ ಕಣಿವೆಯಲ್ಲಿ ಉಗ್ರರು ಪೊಲೀಸ್ ಪಾರ್ಟಿಗಳು ಹಾಗೂ ಸೇನಾಪಡೆಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನ ಸೇನಾ ತುಕಡಿಯ ಮೇಲೆ ಹಲ್ಲೆ ನಡೆಸಲಾಗಿತ್ತು ಈ ಹಲ್ಲೆಯಲ್ಲಿ ಓರ್ವ ಜವಾನ ಗಾಯಗೊಂಡಿದ್ದ.


ಉಗ್ರರು ಸೇನಾ-CRPF ಹಾಗೂ ಜಮ್ಮು-ಕಾಶ್ಮೀರ್ ಪೊಲೀಸರ ಜಂಟಿ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಸತತ ಗುಂಡಿನ ಸುರಿಮಳೆಗೈದಿದ್ದಾರೆ. ಇದಕ್ಕೆ ಭದ್ರತಾ ಪಡೆಯ ಯೋಧರೂ ಕೂಡ ತಕ್ಕ ಉತ್ತರ ನೀಡಿದ್ದಾರೆ. ಈ ವೇಳೆ ಉಗ್ರರು ಅಲ್ಲಿಂದ ಕಾಲ್ಕಿತ್ತುವಲ್ಲಿ ಯಶಸ್ವಿಯಾಗಿದ್ದಾರೆ.


ಕಳೆದ ಹಲವು ತಿಂಗಳಿನಿಂದ ಭದ್ರತಾ ಪಡೆ ಯೋಧರು ಕಣಿವೆಯಲ್ಲಿ ಉಗ್ರರ ಶೋಧಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ಭದ್ರತಾ ಪಡೆಗಳು ಪುಲ್ವಾಮಾ ಜಿಲ್ಲೆಯ ಸೇಬಿನ  ತೋಟದಲ್ಲಿ ಅವಿತು ಕುಳಿತ ಉಗ್ರರ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಆಜಾದ್ ಅಹ್ಮದ್ ಲೋನ್ ಉಗ್ರನನ್ನು ಮಟ್ಟಹಾಕಲಾಗಿತ್ತು. ಆದರೆ, ಈ ದಾಳಿಯಲ್ಲಿ ಭದ್ರತಾ ಪಡೆಯ ಯೋಧರೊಬ್ಬರು ಕೂಡ ಹುತಾತ್ಮರಾಗಿದ್ದರು.