ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್​ ಲ್ಯಾಂಗ್ವೇಜ್ ಲೈಬ್ರರಿಯಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.


ಪೊಲೀಸ್ ಮೂಲಗಳ ಪ್ರಕಾರ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಪೊಲೀಸರಿಗೆ ಕರೆ ಮಾಡಿ ತಮ್ಮ ಇ-ಮೇಲ್ ಗೆ ವಿದ್ಯಾರ್ಥಿಯೊಬ್ಬ ಸ್ಯೂಸೈಡ್ ನೋಟ್ ಕಳುಹಿಸಿರುವುದಾಗಿ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ರಿಷಿ ಜೋಶುವಾ ಥಾಮಸ್ ಎಂದು ಗುರುತಿಸಲಾಗಿದ್ದು, ಸ್ಕೂಲ್ ಆಫ್​ ಲ್ಯಾಂಗ್ವೇಜಸ್ ನಲ್ಲಿ ದ್ವಿತೀಯ ವರ್ಷದ ಎಂಎ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. 


ಪ್ರಾಧ್ಯಾಪಕರ ಕರೆ ಬಳಿಕ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಲೈಬ್ರರಿ ಬಳಿಯಿದ್ದ ಕೊಠಡಿ ಒಳಗಿನಿಂದ ಲಾಕ್ ಆಗಿದ್ದನ್ನು ನೋಡಿ, ಬಾಗಿಲು ಒಡೆದು ಒಳಗೆ ಹೋದ ಪೊಲೀಸರಿಗೆ ಫ್ಯಾನಿನಲ್ಲಿ ವಿದ್ಯಾರ್ಥಿ ನೇತಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆತನನ್ನು ಯುನಿವರ್ಸಿಟಿ ಹೆಲ್ತ್ ಸೆಂಟರ್ ಗೆ ಕರೆದೊಯ್ಯಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸದ್ಯ ವಿದ್ಯಾರ್ಥಿ ಮೃತ ದೇಹವನ್ನು ಸಫ್ದರ್ ಗಂಜ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೃತ ವಿದ್ಯಾರ್ಥಿ ಮನೆಯವರಿಗೆ ವಿಷಯ ತಿಳಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.