ನವದೆಹಲಿ:  ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 1,30,000 ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಉದ್ಯೋಗ ಅರಸುತ್ತಿರುವ ಯುವಕರಿಗೆ ಉತ್ತಮ ಅವಕಾಶ ನೀಡಿದೆ. 


COMMERCIAL BREAK
SCROLL TO CONTINUE READING

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮೇಲ್ವರ್ಗದ ಬಡವರಿಗೂ ಶೇ.10 ಮಿಸಲಾತಿ ಒದಗಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಪೀಯುಶ್ ಗೋಯಲ್ ಹೇಳಿದ್ದಾರೆ. ಈ ಹುದ್ದೆಗಳಲ್ಲಿ 30 ಸಾವಿರ ತಾಂತ್ರಿಕೇತರ, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಇಲಾಖಾವಾರು ಹಾಗೂ ಇತರ ವರ್ಗಗಳಿಗೆ ಮೀಸಲಿಡಲಾಗಿದೆ. ಉಳಿದ ಒಂದು ಲಕ್ಷ ಹುದ್ದೆಗಳನ್ನು ಲೆವೆಲ್ 1 ಪೋಸ್ಟ್ಗಳಿಗೆ ಭರ್ತಿ ಮಾಡಲಾಗುತ್ತಿದ್ದು, ಇದು ಗ್ರೂಪ್-ಡಿ ಹುದ್ದೆಗಳ ನೇಮಕಾತಿ ಎಂದು ಹೇಳಿದ್ದಾರೆ.


ಕಳೆದ ವರ್ಷವೂ ರೈಲ್ವೆ ನೇಮಕಾತಿ ಮಂಡಳಿಯು 63 ಸಾವಿರ ಹುದ್ದೆಗಳಿಗೆ ಅಭರ್ಥಿಗಳನ್ನು ನೇಮಕ ಮಾಡಿತ್ತು. ಆದರೆ ಈ ಬಾರಿ ಗ್ರೂಪ್ ಡಿ ನೇಮಕಾತಿ ಪರೀಕ್ಷೆಯನ್ನು ರೈಲ್ವೆ ನೇಮಕಾತಿ ಮಂಡಳಿ ನಡೆಸುವುದಕ್ಕೆ ಬದಲಾಗಿ ರೈಲ್ವೆ ನೇಮಕಾತಿ ಘಟಕ ನಡೆಸಲಿದೆ. ಮುಂದಿನ ದಿನಗಳಲ್ಲಿಯೂ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು  ರೈಲ್ವೆ ನೇಮಕಾತಿ ಘಟಕ(RRC)ವೇ ನಡೆಸಲಿದೆ ಎನ್ನಲಾಗಿದೆ. 



ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪೀಯುಶ್ ಗೋಯಲ್, ಅಧಿಸುಚನೆಯ ಮಾಹಿತಿಯಿರುವ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರನ್ವಯ, ತಾಂತ್ರಿಕೇತರ ಹುದ್ದೆಗಳಿಗೆ ಫೆಬ್ರವರಿ 28ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ಮಾರ್ಚ್ 4 ರಿಂದ ಹಾಗೂ ಸಚಿವಾಲಯ ಮತ್ತು ಪ್ರತ್ಯೇಕಿತ ವರ್ಗಗಳಿಗೆ ಮಾರ್ಚ್ 8 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಮೂರು ವಿಭಾಗಗಳ 30 ಸಾವಿರ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆ ನಡೆಸಲಿದೆ. ಎರಡನೇ ವಿಭಾಗದಲ್ಲಿ ಲೆವೆಲ್ 1 ಹುದ್ದೆಗಳಿಗೆ ರೈಲ್ವೆ ನೇಮಕಾತಿ ಸೆಲ್ ಪರೀಕ್ಷೆ ನಡೆಸಲಿದ್ದು, ಮಾರ್ಚ್ 12 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.