ನವದೆಹಲಿ: ಮರಳು ಮಾಫಿಯಾದಲ್ಲಿ ಪೊಲೀಸ್ ಅಧಿಕಾರಿಗಳ ಶಾಮೀಲಿನ ಬಗ್ಗೆ ತನಿಖೆ ನಡೆಸುತ್ತಿದ್ದ 35 ವರ್ಷದ ತನಿಖಾ ಪತ್ರಕರ್ತ ಸಂದೀಪ್ ಶರ್ಮಾ ಮೇಲೆ ಕಸ ಸಾಗಿಸುವ ವಾಹನವೊಂದು ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಬೆಳಿಗ್ಗೆ ಮಧ್ಯಪ್ರದೇಶದ ಭಿಂದ್ ಪ್ರದೇಶದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಸುದ್ದಿ ವಾಹಿನಿಯ ಪತ್ರಕರ್ತರಾಗಿದ್ದ ಸಂದೀಪ್ ಶರ್ಮಾ ತಮ್ಮ ಬೈಕ್'ನಲ್ಲಿ ಹೋಗುತ್ತಿದ್ದಾಗ, ಹಿಂದೆ ಬರುತ್ತಿದ್ದ ಕಸ ಸಾಗಿಸುವ ವಾಹನವೊಂದು(dumpster) ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ ಶರ್ಮಾ ಮೇಲೆ ಹರಿದಿದೆ. ಈ ಘಟನೆಯ ವೀಡಿಯೊ ಫೂಟೇಜ್ ದೊರೆತಿದ್ದು, ಶರ್ಮಾ ಅವರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. 



ಈ ಘಟನೆಗೆ ಪೂರಕವೆಂಬಂತೆ, ಪತ್ರಕರ್ತ ಸಂದೀಪ್ ಶರ್ಮಾ ತಾವು ನಡೆಸುತ್ತಿರುವ ಮರಳು ಮಾಫಿಯಾ ತನಿಖೆ ಸಂಬಂಧ ತಮ್ಮ ಜೀವಕ್ಕೆ ಅಪಾಯವಿದೆ ಎಂದು  ಕೆಳ ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.


ವಿಪರ್ಯಾಸವೆಂದರೆ, ಈ ಘಟನೆ ಪೊಲೀಸ್ ಠಾಣೆಯಿಂದ ಸ್ವಲ್ಪವೇ ದೂರದಲ್ಲಿ ನಡೆದಿರುವುದಾಗಿ ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಶರ್ಮಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು, ನಂತರ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.