ಚೆನ್ನೈನಲ್ಲಿ ರಜನಿಕಾಂತ್ ಭೇಟಿ ಮಾಡಿದ ಕಮಲ್ ಹಾಸನ್!
ತಮಿಳುನಾಡು ರಾಜಕೀಯ ಪ್ರವೇಶಿಸುವ ನಿರ್ಧಾರ ಪ್ರಕಟಿಸಿರುವ ನಟ ಕಮಲ್ ಹಾಸನ್, ಭಾನುವಾರ ರಜನಿಕಾಂತ್ ಅವರ ನಿವಾಸದಲ್ಲಿ ಭಾನುವಾರ ಭೇಟಿಯಾಗಿ ಮುಂದಿನ ನಡೆಯ ಕುರಿತು ಸಮಾಲೋಚನೆ ನಡೆಸಿದರು.
ಚೆನ್ನೈ: ತಮಿಳುನಾಡು ರಾಜಕೀಯ ಪ್ರವೇಶಿಸುವ ನಿರ್ಧಾರ ಪ್ರಕಟಿಸಿರುವ ನಟ ಕಮಲ್ ಹಾಸನ್, ಭಾನುವಾರ ರಜನಿಕಾಂತ್ ಅವರ ನಿವಾಸದಲ್ಲಿ ಭಾನುವಾರ ಭೇಟಿಯಾಗಿ ಮುಂದಿನ ನಡೆಯ ಕುರಿತು ಸಮಾಲೋಚನೆ ನಡೆಸಿದರು.
ತಮಿಳು ಸಿನಿಮಾದ ಇಬ್ಬರು ದಿಗ್ಗಜರ ರಾಜಕೀಯ ಒಪ್ಪಂದದ ಕುರಿತಾದ ಊಹಾಪೋಹಗಳ
ನಡುವೆಯೇ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಆದರೆ, ಈ ಎಲ್ಲ ಉಹಾಪೋಹಗಳಿಗೆ ವಿರಾಮ ಹಾಕಲು ಪ್ರಯತ್ನಿಸಿದ ಕಮಲ್ ಹಾಸನ್ ಅವರು, ಇದು ಕೇವಲ ಸ್ನೇಹಯುತ ಭೇಟಿಯಾಗಿದ್ದು, ಯಾವುದೇ ರಾಜಕೀಯ ಮಾತುಕತೆ ನಡೆಸಿಲ್ಲ ಎಂದಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್, "ಇದು ಕೇವಲ ಸ್ನೇಹಯುತ ಭೇಟಿ ಅಷ್ಟೇ, ರಾಜಕೀಯ ಭೇಟಿ ಅಲ್ಲ. ನಾನು ಅವರನ್ನು ಭೇಟಿ ಮಾಡಿ ನನ್ನ ನಿರ್ಧಾರ ತಿಳಿಸಿದೆ. ನಾನು ನನ್ನ ರಾಜಕೀಯ ಪ್ರವೇಶ ಆರಂಭಿಸುವ ಮೊದಲು ನನ್ನ ನೆಚ್ಚಿನ ಜನರನ್ನು ಭೇಟಿಯಾಗುತ್ತಿದ್ದೇನೆ. ಹಾಗೆಯೇ ರಜನಿ ಭೇಟಿ ಸ್ನೇಹಯುತ ಭೇಟಿಯಾಗಿದೆಯೇ ಹೊರತು ರಾಜಕೀಯ ಭೇಟಿ ಅಲ್ಲ" ಎಂದು ಸ್ಪಷ್ಟಪಡಿಸಿದ್ದರಲ್ಲದೆ, ರಜನಿಕಾಂತ್ ಅವರಿಗೆ ಶುಭ ಕೋರಿರುವುದಾಗಿಯೂ ತಿಳಿಸಿದರು.
ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಜನಿಕಾಂತ್, ‘ತಮಿಳುನಾಡಿನ ಜನತೆಯ ಸೇವೆಗಾಗಿ ಕಮಲ್ ಮುಂದಾಗಿದ್ದಾರೆ. ಹಣ ಅಥವಾ ಖ್ಯಾತಿಗಾಗಿ ಅವರು ರಾಜಕೀಯ ಪ್ರವೇಶಿಸಿಲ್ಲ. ರಾಜ್ಯದ ಜನರ ಸೇವೆ ಮಾಡುವ ಉದ್ದೇಶವಿರುವ ಅವರಿಗೆ ಯಶಸ್ಸು ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ಕಮಲ್–ರಜನಿ ರಾಜಕೀಯ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ, ‘ಕಾಲವೇ ಅದಕ್ಕೆ ಉತ್ತರಿಸಬೇಕು’ ಎಂದು ಕಮಲ್ ಉತ್ತರಿಸಿದರು.