ಚೆನ್ನೈ: ಮುಂದಿನ‌ ವರ್ಷ ತಮಿಳುನಾಡಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಈಗಾಗಲೇ ರಂಗೇರತೊಡಗಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ಕೊಟ್ಟಿದ್ದರು. ಡಿಎಂಕೆಯ ಬಂಡಾಯ ನಾಯಕ ಅಳಗಿರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬ ವದಂತಿ ಇದೆ. ಖ್ಯಾತ ನಟ ರಜನಿಕಾಂತ್ ತಮ್ಮ ಹೊಸ ಪಕ್ಷದ ರೂಪರೇಷೆಗಳನ್ನು ಇದೇ ಡಿಸೆಂಬರ್ 31ರಂದು ಪ್ರಕಟಿಸಲಿದ್ದಾರೆ. ಈ ನಡುವೆ ಇನ್ನೊಬ್ಬ ನಟ ಕಮಲ್ ಹಾಸನ್ ಕೂಡ ಡಿಸೆಂಬರ್ 13ರಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಮಲ್ ಹಾಸನ್ 2018ರ ಫೆಬ್ರುವರಿಯಲ್ಲಿ ‘ಮಕ್ಕಳ್‌ ನೀದಿ ಮೈಯಂ’ (Makkal Needhi Maiam) ಪಕ್ಷ ಸ್ಥಾಪಿಸಿದ್ದರು. ನಂತರ ಇದೇ ಮೊದಲ ಬಾರಿಗೆ ಅವರ ಪಕ್ಷ  ‘ಮಕ್ಕಳ್‌ ನೀದಿ ಮೈಯಂ’ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಡಿಸೆಂಬರ್ 13ರಿಂದ ಪ್ರಚಾರ ಆರಂಭಿಸಲಿರುವ ಕಮಲ್‌ ಹಾಸನ್‌ 16ರವರೆಗೆ ಮೊದಲ ಹಂತದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. 


ಬಾಲ್ಕನಿ ಸರ್ಕಾರಕ್ಕೆ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನವಿರಲಿ-ಕಮಲ್ ಹಾಸನ್


ಮೊದಲ ಹಂತದಲ್ಲಿ ಕಮಲ್‌ ಹಾಸನ್‌ (Kamal Haasan) ಅವರು ಮಧುರೈ, ಥೇನಿ, ದಿಂಡಿಗಲ್‌, ವಿರುಧನಗರ, ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಕ್ಕಳ್‌ ನೀದಿ ಮೈಯಂ ಪಕ್ಷದ ಉಪಾಧ್ಯಕ್ಷ ಆರ್‌. ಮಹೇಂದ್ರನ್‌ ಅವರು ಮಾಹಿತಿ ನೀಡಿದ್ದಾರೆ.


ರಾಜಕೀಯವಷ್ಟೇ ಅಲ್ಲ, ತಮಿಳುನಾಡನ್ನು ಉತ್ತಮಗೊಳಿಸಬೇಕಾಗಿದೆ - ಕಮಲ್ ಹಾಸನ್


ಕಮಲ್‌ ಹಾಸನ್ ಅವರು 2018ರ ಫೆಬ್ರುವರಿಯಲ್ಲಿ ‌ಮಕ್ಕಳ್‌ ನೀದಿ ಮೈಯಂ ಸ್ಥಾಪಿಸಿದ ಬಳಿಕ  2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆ ಚುನಾವಣೆಯಲ್ಲಿ ಮಕ್ಕಳ್‌ ನೀದಿ ಮೈಯಂ ಪಕ್ಷವು ಒಂದೇ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈಗ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪಾತ್ರ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಇದಲ್ಲದೆ 'ಆದ್ಯಾತ್ಮದ ರಾಜಕಾರಣ' ಮಾಡುವುದಾಗಿ ಹೇಳಿರುವ ರಜನಿಕಾಂತ್ ಅವರ ಹೊಸ ಪಕ್ಷದ ರೂಪುರೇಷೆಗಳು ಹೇಗಿರಲಿವೆ ಎಂಬುದು ಕೂಡ ಕುತೂಹಲ ಮೂಡಿಸಿದೆ.