ರಾಜ್ಯಸಭೆಯಲ್ಲಿ ಸದ್ದು ಮಾಡಿದ ಕರ್`ನಾಟಕ` ರಾಜಕೀಯ!
ಕರ್ನಾಟಕ ಸರ್ಕಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೇ ನಂಬಿಕೆಯಿಲ್ಲ. ಹಾಗಾಗಿಯೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಿಂದ ಯಾವುದೇ ಆಪರೇಷನ್ ಕಮಲ ನಡೆದಿಲ್ಲ- ರಾಜ್ಯಸಭೆಯಲ್ಲಿ ಸಚ್ವಿಯ ಪ್ರಹ್ಲಾದ್ ಜೋಶಿ ಸ್ಪಷ್ಟನೆ.
ನವದೆಹಲಿ: ಕರ್ನಾಟಕ ರಾಜಕೀಯ ಬಿಕ್ಕಟ್ಟು ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದೆ.
ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚಿಸಲು ನಿಯಮ 267ರ ಅಡಿಯಲ್ಲಿ ಅನುಮತಿ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಮಂಗಳವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದರು.
ಕಾಂಗ್ರೆಸ್ ಮನವಿಗೆ ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ಸಮ್ಮತಿಸಿರಲಿಲ್ಲ. ಹೀಗಾಗಿ ಬುಧವಾರ ಸದನ ಪ್ರಾರಂಭವಾಗುತ್ತಿದ್ದಂತೆ ಮುಂಭಾಗಕ್ಕೆ ಬಂದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ಕುದುರೆ ವ್ಯಾಪಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಸಭಾತ್ಯಾಗ ನಡೆಸಿದರು.
ಈ ವೇಳೆ ಮಧ್ಯಪ್ರವೆಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಮೇಲೆ ಸ್ವಪಕ್ಷೀಯರಿಗೆ ನಂಬಿಕೆ ಇಲ್ಲ. ಅದಕ್ಕಾಗಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಿಂದ ಯಾವುದೇ ಆಪರೇಷನ್ ಕಮಲ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.