ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಅಧಿನಾಯಕ ಎಂ.ಕರುಣಾನಿಧಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಾವೇರಿ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ. 


COMMERCIAL BREAK
SCROLL TO CONTINUE READING

"ಕಾವೇರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಕಳೆದ ಕೆಲವು ಗಂಟೆಗಳಿಂದ ಚಿಂತಾಜನಕ ಸ್ಥಿತಿ ತಲುಪಿದ್ದು, ಎಷ್ಟೇ ಚಿಕಿತ್ಸೆ ನೀಡಿದರೂ ಅಂಗಾಂಗಳ ಕಾರ್ಯನಿರ್ವಹಣೆ ಕ್ಷೀಣಿಸುತ್ತಿದೆ" ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.



ಆಸ್ಪತ್ರೆಯ ಹೊರಗೆ ಡಿಎಂಕೆ ಕಾರ್ಯಕರ್ತರು ಮತ್ತು ಎಂ.ಕರುಣಾನಿಧಿ ಬೆಂಬಲಿಗರು ಜಮಾಯಿಸಿದ್ದು, 'ಎಝುಂಧು ವಾ ತಲೈವಾ' (ಎದ್ದೇಳು ನಮ್ಮ ನಾಯಕ) ಮತ್ತು "ವಾ, ವಾ, ಗೋಪಾಲಪುರಂ ಪೋಲಾಮ್ ವಾ" (ಗೋಪಾಲಪುರಂಗೆ ಹೋಗೋಣ ಬಾ) ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಎಂಕೆ ಕಾರ್ಯಕರ್ತರು "ನಮ್ಮ ನಾಯಕ ಕರುಣಾನಿಧಿ ಅವರ ಆರೋಗ್ಯದ ಬಗ್ಗೆ ಒಳ್ಳೆಯ ಸುದ್ದಿ ಕೇಳಲು ನಾವು ಬಯಸುತ್ತೇವೆ" ಎಂದಿದ್ದಾರೆ. 



ಈ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬಿಗಿ ಭದ್ರತೆ ಒದಗಿಸುವಂತೆ ಪೊಲೀಸ್ ಮಹಾನಿರ್ದೇಶಕರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಫ್ಯಾಕ್ಸ್ ಮೂಲಕ ಸೂಚನೆ ನೀಡಿದ್ದಾರೆ. ಇನ್ನು ಇಂದು ಪೆರಿಯಾರ್​​​​​​ ತಿಂಡಾಲ್​​​​​ನಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಭೆಯನ್ನು ಕೀ ವೀರಮನಣಿ ರದ್ದುಗಿಳಿಸಿದ್ದಾರೆ. ರಾಜರತಿನಂ ಸ್ಟೇಡಿಯಂನಲ್ಲಿ ಸುಮಾರು 1200 ಪೊಲೀಸ್​ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಇದರ ಜೊತೆಗೆ 500 ಸಶಸ್ತ್ರ ಪಡೆ ಮತ್ತು 700 ಸ್ಪೇಷಲ್​​​ ಫೋರ್ಸ್​ ಕಾರ್ಯ ನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಾದ್ಯಂತ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.



ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಡಿಎಂಕೆ ನಾಯಕ ಎಂ.ಕರುಣಾನಿಧಿ(94) ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ನಂತರ ಕರುಣಾನಿಧಿ ಆರೋಗ್ಯ ಸ್ಥಿತಿ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ, "ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಕರುಣಾನಿಧಿಯವರಿಗೆ ಉನ್ನತ ವೈದ್ಯರುಗಳು ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಸುಧಾರಣೆ ಕಾಣುವವರೆಗೂ ಆಸ್ಪತ್ರೆಯಲ್ಲೇ ದಾಖಲಾಗಿರುತ್ತಾರೆ. ಮುಂದಿನ 24 ಗಂಟೆಗಳಲ್ಲಿ ಚಿಕಿತ್ಸೆಗೆ ಕರುಣಾನಿಧಿ ಹೇಗೆ ಸ್ಪಂದಿಸುತ್ತಾರೆ ಎಂಬುದು ಅವರ ಆರೋಗ್ಯ  ಸ್ಥಿತಿಯನ್ನು ನಿರ್ಧರಿಸಲಿದೆ" ಎಂದು ಹೇಳಿಕೆ ನೀಡಿತ್ತು.