ಶ್ರೀನಗರ: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿದ ಬೆನ್ನಲ್ಲೇ ಜಮ್ಮ- ಕಾಶ್ಮೀರದ ಶ್ರೀನಗರ, ಪುಲ್ವಾಮ, ಅನಂತ್‌ನಾಗ್, ಶೋಪಿಯಾನ್‌ನ ಅನೇಕ ಪ್ರದೇಶಗಳಲ್ಲಿ ಗುರುವಾರ ಬೀದಿಗಿಳಿದ ಯುವಜನತೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು. 


COMMERCIAL BREAK
SCROLL TO CONTINUE READING

ಯುವಕರ ಗುಂಪು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿರುವ ಫೋಟೋಗಳು, ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಈ ದೇಶದ್ರೋಹಿ ಕೃತ್ಯಕ್ಕೆ ಕಿಡಿ ಕಾರಿದ್ದಾರೆ. 


ಮಾಹಿತಿಯ ಪ್ರಕಾರ, ಶ್ರೀನಗರದ ನಹತಾ, ರಜಿಯಾ ಕಡಲ್, ನವಾ ಕಡಲ್, ಸೌರಾ ಮತ್ತು ರಾಂಬಾಗ್ ಸೇರಿದಂತೆ ದಕ್ಷಿಣ ಕಾಶ್ಮೀರದ ಕೆಲವರು ಪುಲ್ವಾಮಾ ಚೌಕ್‌ನಲ್ಲಿ ಭಾರತದ ಸೋಲನ್ನು ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಭದ್ರತಾ ಪಡೆ ಮತ್ತು ದೇಶದ್ರೋಹಿ ಘೋಷಣೆಗಳನ್ನು ಕೂಗುತ್ತಿದ್ದವರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಗುಂಪುಗಳನ್ನು ಚದುರಿಸಲು ಅಶ್ರುವಾಯು ಸಿಡಿಸಲಾಗಿದೆ ಎಂದು ವರದಿಯಾಗಿದೆ. 


ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎನ್ನಲಾಗಿದೆ.