ನವದೆಹಲಿ:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ವಿಜ್ಞಾನಿ ಎಸ್.ನಂಬಿ ನಾರಾಯಣನ್ ಅವರಿಗೆ 1.3 ಕೋಟಿ ರೂ.ಗಳ ಪರಿಹಾರ ನೀಡಲು ಕೇರಳ ಸಚಿವ ಸಂಪುಟ  ತಾತ್ವಿಕ ಅನುಮೋದನೆ ನೀಡಿದೆ. 


COMMERCIAL BREAK
SCROLL TO CONTINUE READING

ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ ನಾರಾಯಣನ್ ಅವರನ್ನು 1994 ರ ನವೆಂಬರ್‌ನಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿಸಲಾಯಿತು. 


ಸೆಪ್ಟೆಂಬರ್ 2018 ರಲ್ಲಿ ಸುಪ್ರೀಂ ಕೋರ್ಟ್ ಎಸ್ . ನಂಬಿ ನಾರಾಯಣನ್ ಅವರನ್ನು ಗೂಢಾಚಾರ ಆರೋಪದಿಂದ ಮುಕ್ತಗೊಳಿಸಿ, ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಕೇರಳ ಪೊಲೀಸರು ಸುಖಾಸುಮ್ಮನೆ ಬಂಧಿಸಿ, ತೊಂದರೆ ಕೊಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಕಿಡಿಕಾರಿತ್ತು. ಜೊತೆಗೆ  ಗೂಢಾಚಾರ ಪ್ರಕರಣದಲ್ಲಿ ನಾರಾಯಣನ್ ಅವರನ್ನು ಬಂಧಿಸಿದ್ದ ಕೇರಳ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಆದೇಶಿಸಿತು. ಅಲ್ಲದೆ ಈ ಪ್ರಕರಣದಲ್ಲಿ ಮಾನಸಿಕ ಹಿಂಸೆಗೆ ಒಳಗಾದ ಕಾರಣ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನ್ಯಾಯಪೀಠವು ನಾರಾಯಣನ್ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆಯೂ ನಿರ್ದೇಶನ ನೀಡಿತು.