ಕೊಚ್ಚಿ: ಕೇರಳ ನನ್ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಫಾದರ್ ಕುರಿಯಕೋಸ್ ಕಟ್ಟುಥಾರ ಸೋಮವಾರ ಪಂಜಾಬ್ನ ಜಲಂಧರ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಜಲಂಧರ್ ಬಳಿ ದಸ್ವಾ ಚರ್ಚ್ ನ ಕೋಣೆಯೊಂದರಲ್ಲಿ ಸೋಮವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ. ಕುರಿಯಕೋಸ್ ಅವರ ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆದರೆ, ಅವರ ಸಾವಿನ ಬಗ್ಗೆ ಶಂಕೆ ಇದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿ ಆರೋಪ ಎದುರಿಸುತ್ತಿರುವ  ಬಿಶಪ್ ಫ್ರಾಂಕೊ ಮುಲಕ್ಕಲ್ ಅವರ ವಿರುದ್ಧ ಫಾದರ್ ಕುರಿಯಕೋಸ್ ಕಟ್ಟುಥಾರ ಪ್ರಮುಖ ಸಾಕ್ಷಿಯಾಗಿದ್ದರು. ಬಿಷಪ್ ಮುಲಕ್ಕಲ್ ಅವರ ವಿರುದ್ಧ ಧ್ವನಿ ಎತ್ತಿದ್ದ ಫಾದರ್ ಕುರಿಯಾಕೋಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಹೇಳಿಕೆ ನೀಡಿದ್ದರು.


ಆದಾಗ್ಯೂ, ಫಾದರ್ ಕುರಿಯಕೋಸ್ ಕಟ್ಟುಥಾರ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. "62 ವರ್ಷದ ಅವರು ದಾಸುಯಾದಲ್ಲಿನ ಸೇಂಟ್ ಪಾಲ್ಸ್ ಚರ್ಚಿನಲ್ಲಿ ಉಳಿಯುತ್ತಿದ್ದರು, ಅಲ್ಲೇ ಅವರು ಸಾವನ್ನಪ್ಪಿದ್ದಾರೆ. ಅವರ ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಕಂಡುಬಂದಿಲ್ಲ" ಎಂದು  ದಾಸುಯಾ ಡಿಎಸ್ಪಿ ಎ.ಆರ್ ಶರ್ಮಾ ಹೇಳಿದ್ದಾರೆ.


ಅವರು ಹಾಸಿಗೆಯ ಮೇಲೆ ವಾಂತಿ ಮಾಡಿದ್ದಾರೆಂದು ಪತ್ತೆಯಾಗಿದೆ. ಸ್ಥಳದಲ್ಲಿ ರಕ್ತದೊತ್ತಡದ ಮಾತ್ರೆಗಳು ಕಂಡುಬಂದಿವೆ ಎಂದು ಡಿಎಸ್ಪಿ ಹೇಳಿಕೆ ನೀಡಿದ್ದಾರೆ.