ಒರಿಸ್ಸಾದಲ್ಲಿ ಏಪ್ರಿಲ್ 30ರವರೆಗೂ ಲಾಕ್ಡೌನ್ ಮುಂದುವರಿಕೆ
ಲಾಕ್ಡೌನ್ (Lockdown) ಮುಂದುವರೆಸಿದ ಮೊದಲ ರಾಜ್ಯ ಒರಿಸ್ಸಾ ಆಗಿದ್ದು ಸಿಎಂ ನವೀನ್ ಪಟ್ನಾಯಕ್ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ.
ನವದೆಹಲಿ: ತೆಲಾಂಗಣ, ಪುದುಚೇರಿ, ಛತ್ತೀಸ್ ಗಢ ರಾಜ್ಯಗಳು ಲಾಕ್ಡೌನ್ ಮುಂದುವರೆಸುವುದೇ ಸೂಕ್ತ ಎಂದು ಕೇಂದ್ರ ಸರ್ಕಾರಕ್ಕೆ ಹೇಳುತ್ತಿದ್ದ ನಡುವೆ ಹಾಗೂ ಲಾಕ್ ಡೌನ್ ಅನ್ನು ಮುಕ್ತಾಯಗೊಳಿಸಬೇಕೋ ಅಥವಾ ಮುಂದುವರೆಸಬೇಕೋ ಎಂದು ಕೇಂದ್ರ ಸರ್ಕಾರ ಜಿಜ್ಞಾಸೆಯಲ್ಲಿದ್ದ ನಡುವೆ ಒರಿಸ್ಸಾದಲ್ಲಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ಮುಂದುವರಿಸಲಾಗಿದೆ.
ಮೊನ್ನೆ ಸಂಸತ್ತಿನ ಸಭಾನಾಯಕರ ಸಭೆ ವೇಳೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ಏ. 11ರಂದು ಮತ್ತೊಮ್ಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೇಂದ್ರದ ಆದೇಶಕ್ಕೆ ಕಾಯದೆ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ತಮ್ಮ ರಾಜ್ಯದಲ್ಲಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ಮುಂದುವರೆಸುವುದಾಗಿ ಆದೇಶ ಮಾಡಿದ್ದಾರೆ.
ಲಾಕ್ಡೌನ್ (Lockdown) ಮುಂದುವರೆಸಿದ ಮೊದಲ ರಾಜ್ಯ ಒರಿಸ್ಸಾ ಆಗಿದ್ದು ಸಿಎಂ ನವೀನ್ ಪಟ್ನಾಯಕ್ ಲಾಕ್ಡೌನ್ ಮುಂದುವರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಲಾಕ್ಡೌನ್ ಮುಂದುವರೆಸಿರುವುದರಿಂದ ತಮ್ಮ ರಾಜ್ಯಕ್ಕೆ ಏಪ್ರಿಲ್ 30ರವರೆಗೂ ರೈಲ್ವೆ ಅಥವಾ ವಿಮಾನ ಸಂಚಾರ ಮಾಡದಂತೆ ಮನವಿ ಮಾಡಿದ್ದಾರೆ.
ಇದಲ್ಲದೆ ರಾಜ್ಯದಲ್ಲಿ ಜೂನ್ 17ರವರೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಗಿತಗೊಳಿಸಿ ಕೂಡ ಆದೇಶ ಮಾಡಿದ್ದಾರೆ. ಒರಿಸ್ಸಾದಲ್ಲೂ ಕರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶಕ್ಕೂ ಕಾಯದೆ ಲಾಕ್ ಡೌನ್ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.