ನವದೆಹಲಿ: ದೇಶದ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡುವ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2019 ಅನ್ನು ಲೋಕಸಭೆಯಲ್ಲಿ ಗುರುವಾರ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. 


COMMERCIAL BREAK
SCROLL TO CONTINUE READING

ತ್ರಿವಳಿ ತಲಾಖ್ ಮಸೂದೆಯು ಮುಸ್ಲಿಂ ಗಂಡಸರು ತಮ್ಮ ಪತ್ನಿಗೆ ಮೂರು ಬಾರಿ 'ತಲಾಖ್, ತಲಾಖ್, ತಲಾಖ್' ಎಂದು ಹೇಳುವ ಮೂಲಕ ವೈವಾಹಿಕ ಬಂಧವನ್ನು ಕಳಚಿಕೊಳ್ಳುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಲಿದೆ. ಅಲ್ಲದೆ, ಈ ರೀತಿ ತಲಾಖ್ ಮೂಲಕ ವಿಚ್ಚೇದನ ನೀಡುವುದನ್ನು ಅಪರಾಧ ಎಂದು ಪರಿಗಣಿಸಲಿದ್ದು, ಒಂದು ವೇಳೆ ಆರೋಪ ಸಾಬೀತಾದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.


ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಡಿಎಂಕೆ, ಟಿಎಂಸಿ ಮತ್ತು ಬಿಜೆಪಿ ಮಿತ್ರ ಜೆಡಿಯು ಸಂಸದರು ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಲೋಕಸಭೆಯಿಂದ ಹೊರನಡೆದರು. ಕಡೆಯದಾಗಿ ಮಸೂದೆಯ ಪರವಾಗಿ 303 ಮತಗಳು ಬಂದರೆ, ಮಸೂದೆಯ ವಿರುದ್ಧವಾಗಿ 82 ಮತಗಳು ಬಿದ್ದವು. ನರೇಂದ್ರ ಮೋದಿ ಸರ್ಕಾರ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಅಧಿವೇಶನದಲ್ಲಿ ಮಂಡಿಸಿದ ಮೊದಲ ಕರಡು ಶಾಸನ ಇದಾಗಿದೆ.


ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, "ನಾನು ರಾಜೀವ್ ಗಾಂಧಿ ಸರ್ಕಾರದ ಕಾನೂನು ಮಂತ್ರಿಯಲ್ಲ. ಮಸೂದೆಯನ್ನು ವಿರೋಧಿಸುವ ಹಿಂದೆ ಮತ ಬ್ಯಾಂಕ್ ರಾಜಕೀಯವಿದೆ. 2017 ರಿಂದ 345 ಪ್ರಕರಣಗಳು ಸೇರಿದಂತೆ ಈ ಕಾನೂನನ್ನು ಸುಪ್ರೀಂ ಕೋರ್ಟ್ ಜಾರಿಗೊಳಿಸಿದ ಬಳಿಕ 547 ಟ್ರಿಪಲ್ ತಲಾಖ್ ಪ್ರಕರಣಗಳು ದಾಖಲಾಗಿವೆ. 21 ಇಸ್ಲಾಮಿಕ್ ರಾಷ್ಟ್ರಗಳು ಈ ಕಾನೂನನ್ನು ಹೊಂದಿವೆ. ಈ ಮಸೂದೆಗೂ ಯಾವುದೇ ಜಾತಿ ಅಥವಾ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದರು.