ಮುಂಬೈ : ಸಂಪೂರ್ಣ ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನಿಯೋಗದೊಂದಿಗೆ ಸಭೆ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರೈತರ ಬಹುತೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಸಭೆ ಬಳಿಕ ಮಾತನಾಡಿದ ಅವರು, "ರೈತರ ಬಹುತೇಕ ಬೇಡಿಕೆಗಳನ್ನು ನಾವು ಸ್ವೀಕರಿಸಿದ್ದು, ಅವುಗಳ ಈಡೇರಿಕೆ ಕುರಿತು ಲಿಖಿತ ಪತ್ರವನ್ನು ಅವರಿಗೆ ನೀಡಿದ್ದೇವೆ" ಎಂದರು.


ಇದಕ್ಕೂ ಮುನ್ನ, ರೈತರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಧನಾತ್ಮಕ ದೃಷ್ಟಿಕೋನ ಹೊಂದಿತ್ತು. ರೈತರು ಪಾದಯಾತ್ರೆ ಆರಂಭಿಸಿದ ದಿನದಿಂದಲೂ ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲು ನಾವು ಪ್ರಯತ್ನಿಸಿದ್ದೆವು. ಆದರೆ ಮೋರ್ಚಾ ನಡೆಸಿಯೇ ತೀರುವ ಬಗ್ಗೆ ಅವರು ದೃಢ ಸಂಕಲ್ಪಿತರಾಗಿದ್ದರು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರು ವಿಧಾನಸಭೆಯಲ್ಲಿ ಹೇಳಿದರು. 


ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದ ಸುಮಾರು 30,000 ರೈತರು ನಾಸಿಕ್ನಿಂದ ಮುಂಬೈ'ನ ಅಜಾದ್ ಮೈದಾನದವರೆಗೆ 180 ಕಿ.ಮೀ. ಪ್ರತಿಭಟನಾ ಜಾಥಾ ನಡೆಸಿದ್ದರು. 


ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಸೀತಾರಾಂ ಯೆಚೂರಿ ಅವರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. "ಈ ಸಮಸ್ಯೆಗಳಿಗೆ ಇರುವ ಒಂದೇ ಒಂದು ಪರಿಹಾರವೆಂದರೆ ಸರ್ಕಾರ ರೈತರ ಬೇಡಿಕೆಗಳನ್ನು ಸ್ವೀಕರಿಸಬೇಕು. ಏಕೆಂದರೆ, ಇದುವರೆಗೂ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಕೇವಲ ಭರವಸೆಗಳನ್ನು ನೀಡಿದೆಯೇ ವಿನಃ ಯಾವುದನ್ನೂ ಈಡೇರಿಸಿಲ್ಲ. ಹೀಗಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರಿಂದ ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ" ಎಂದಿದ್ದಾರೆ. 


ರಾಜ್ಯದ ರೈತರು ಸಾಲ ಮತ್ತು ವಿದ್ಯುತ್ ಬಿಲ್ಗಳ ಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾ, ಕೃಷಿ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಣೆ, ರೈತರಿಗೆ ಪಿಂಚಣಿ ಯೋಜನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಿದ್ದಾರೆ. 


ಅಲ್ಲದೆ, ಪ್ರತಿಭಟನಾ ನಿರತ ರೈತರು ತಮ್ಮ ಊರಿಗೆ ಹಿಂದಿರುಗಲು ಅನುಕೂಲವಾಗುವಂತೆ ಕೇಂದ್ರ ರೈಲ್ವೆಯು ಮುಂಬೈನ CSMTಯಿಂದ ಭುಸಾವಾಲ್'ಗೆ ಇಂದು ರಾತ್ರಿ 8.50 ಗಂಟೆಗೆ ಮತ್ತು ರಾತ್ರಿ 10.00 ಗಂಟೆಗೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.