ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಲಿದ್ದಾರೆ. ಆರ್‌ಎಸ್‌ಎಸ್ ಮುಖಂಡ ಭೈಯಾಜಿ ಜೋಶಿ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಮಹಾರಾಷ್ಟ್ರ ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ನೇತೃತ್ವದ ಹಿರಿಯ ಬಿಜೆಪಿ ನಾಯಕರು ಇಂದು ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಈ ಮೊದಲು ಈ ಸಭೆ ಬೆಳಿಗ್ಗೆ 11: 30 ಕ್ಕೆ ನಿಗದಿಯಾಗಿತ್ತು, ನಂತರ ಹಠಾತ್ ಬದಲಾವಣೆಯಾಗಿದೆ. ಮೂಲಗಳ ಪ್ರಕಾರ, ಬಿಜೆಪಿ ಖಂಡಿತವಾಗಿಯೂ ರಾಜ್ಯಪಾಲರನ್ನು ಭೇಟಿ ಮಾಡುತ್ತದೆ ಆದರೆ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸುವುದಿಲ್ಲ.


COMMERCIAL BREAK
SCROLL TO CONTINUE READING

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ ಮುಖಂಡ ಸಂಜಯ್ ರೌತ್, ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಲು ಹೋದರೆ ಅದು ಒಳ್ಳೆಯದು. ಅವರು ಸರ್ಕಾರ ರಚಿಸುವ ಹಕ್ಕು ಮಂಡಿಸಿದರೆ, ಅದೂ ಕೂಡ ಒಳ್ಳೆಯದು ಎಂದರು. ಆದರೆ, ಆರ್‌ಎಸ್‌ಎಸ್‌ನ ಮಧ್ಯಸ್ಥಿಕೆಗೆ ಸಂಬಂಧಿಸಿದ ಸುದ್ದಿಗಳನ್ನು ಸಂಜಯ್ ರೌತ್ ತಳ್ಳಿಹಾಕಿದರು ಮತ್ತು ಸಂಘದೊಂದಿಗೆ ಈ ವಿಷಯದ ಬಗ್ಗೆ ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಶಿವಸೇನೆಗೆ ತನ್ನ ಪಕ್ಷದ ಶಾಸಕರು ಪಕ್ಷಾಂತರ ಪರ್ವಕ್ಕೆ ಮುಂದಾದರೆ ಎಂಬ ಭೀತಿ ಎದುರಾಗಿದೆ ಎಂಬ ವರದಿಗಳೂ ಬಂದವು. ಹೀಗಾಗಿ ಮಾತೋಶ್ರೀಯಲ್ಲಿ ತನ್ನ ಶಾಸಕಾಂಗ ಪಕ್ಷದ ಸಭೆಯ ನಂತರ, ಶಿವಸೇನೆಯ ಎಲ್ಲ ಶಾಸಕರನ್ನು ನಿರ್ದಿಷ್ಟ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಶಿವಸೇನೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 


ಈ ವರದಿಗಳನ್ನು ತಿರಸ್ಕರಿಸಿದ ಸಂಜಯ್ ರೌತ್, ಪರೋಕ್ಷವಾಗಿ ಬಿಜೆಪಿಯ ಮೇಲೆ ದಾಳಿ ನಡೆಸಿ ಯಾರಿಗಾದರೂ ಶಕ್ತಿ ಇದ್ದರೆ ನಮ್ಮ ಶಾಸಕರ ಒಗ್ಗಟ್ಟನ್ನು ಒಡೆದು ತೋರಿಸಿ ಎಂದು ಸವಾಲು ಹಾಕಿದ್ದಾರೆ. ನಾವು ನಮ್ಮ ಶಾಸಕರನ್ನು ಬೇರೆಡೆಗೆ ಸ್ಥಳಾಂತರಿಸುವುದಿಲ್ಲ. ಆದರೆ, ಇತರ ಕೆಲವು ಪಕ್ಷಗಳ ಮುಖಂಡರು ತಮ್ಮ ಪಕ್ಷದ ಶಾಸಕರ ಬಗ್ಗೆ ಇಂತಹ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಆಡಳಿತ ಪಕ್ಷವು ಕುದುರೆ ವ್ಯಾಪಾರ ಮತ್ತು ಒತ್ತಡ ತಂತ್ರಗಳನ್ನು ಬಳಸುವುದು ಇಂತಹ ಸಂದರ್ಭಗಳಲ್ಲಿ ಕಂಡುಬರುತ್ತದೆ. ಆದರೆ ಕರ್ನಾಟಕ ಮತ್ತು ಗೋವಾದಲ್ಲಿ ಕಂಡುಬರುವಂತೆ ಇಲ್ಲಿ ಏನೂ ಸಂಭವಿಸುವುದಿಲ್ಲ ಎಂದು ರೌತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.