ಮಹಾರಾಷ್ಟ್ರ: `5 ವರ್ಷಗಳ ಕಾಲ ಶಿವಸೇನೆಗೆ ಮುಖ್ಯಮಂತ್ರಿ ಪಟ್ಟ` ಎಂದ ಸಂಜಯ್ ರೌತ್!
ಇಲ್ಲಿಯವರೆಗೆ, 50-50 ಸೂತ್ರದ ಆಧಾರದ ಮೇಲೆ ಸರ್ಕಾರ ರಚನೆಯಾಗುತ್ತದೆ ಮತ್ತು ಶಿವಸೇನೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿತ್ತು.
ಮುಂಬೈ: ಮಹಾರಾಷ್ಟ್ರ(Maharashtra)ದಲ್ಲಿ ಸರ್ಕಾರ ರಚನೆಯ ಬಗ್ಗೆ ಶಿವಸೇನೆ(Shiv Sena) ಮುಖಂಡ ಸಂಜಯ್ ರೌತ್ ದೊಡ್ಡ ಹೇಳಿಕೆ ನೀಡಿದ್ದಾರೆ. 5 ವರ್ಷಗಳ ಕಾಲ ಶಿವಸೇನೆಗೆ ಮುಖ್ಯಮಂತ್ರಿಯೇ ಇರುತ್ತಾರೆ ಎಂದು ಸಂಜಯ್ ರೌತ್ ಹೇಳಿದ್ದಾರೆ. ಇಲ್ಲಿಯವರೆಗೆ, 50-50 ಸೂತ್ರದ ಆಧಾರದ ಮೇಲೆ ಸರ್ಕಾರ ರಚಿಸಲಾಗುವುದು ಮತ್ತು ಎರಡೂವರೆ ವರ್ಷಗಳ ಕಾಲ ಶಿವಸೇನೆ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಉಳಿದ ಅವಧಿಗೆ ಮಿತ್ರ ಪಕ್ಷದ ನಾಯಕ ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕರ್ ಮುಖ್ಯಮಂತ್ರಿಯಾಗಬೇಕೆಂಬುದು ಮಹಾರಾಷ್ಟ್ರದ ಜನರ ಆಶಯ ಎಂದು ಸಂಜಯ್ ರೌತ್ ಹೇಳಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರದ ಸಿಎಂ ಯಾರು ಎಂದು ನಿರ್ಧರಿಸಲಾಗುವುದು ಎಂದಿರುವ ಸಂಜಯ್ ರೌತ್, ಶುಕ್ರವಾರ ಶಿವಸೇನೆ, ಎನ್‌ಸಿಪಿ(NCP) ಮತ್ತು ಕಾಂಗ್ರೆಸ್ (Congress) ಮೂರು ಪಕ್ಷಗಳ ಮುಖಂಡರು ಕುಳಿತು ಸರ್ಕಾರ ರಚನೆ ಕುರಿತು ಚರ್ಚಿಸಲಿದ್ದಾರೆ ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಬಿಜೆಪಿ ವಿರುದ್ಧ ಹರಿಹೈದ ಸಂಜಯ್ ರೌತ್ ಮಹಾರಾಷ್ಟ್ರದ ಅಧಿಕಾರವನ್ನು ದೆಹಲಿಯಿಂದ ಚಲಾಯಿಸಲು ಸಾಧ್ಯವಿಲ್ಲ. ಬಾಲಾಸಾಹೇಬ್ ಠಾಕ್ರೆ ಮತ್ತು ಶರದ್ ಪವಾರ್ ಯಾವಾಗಲೂ ದೆಹಲಿಯ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದು ನುಡಿದರು.
'ಕೆಲವೊಮ್ಮೆ ಕೆಲವು ಸಂಬಂಧಗಳಿಂದ ಹೊರಬರುವುದು ಒಳ್ಳೆಯದು. ಅಹಂಕಾರಕ್ಕಾಗಿ ಅಲ್ಲ, ಆದರೆ ಸ್ವಾಭಿಮಾನಕ್ಕಾಗಿ' ಎಂದು ಸಂಜಯ್ ರೌತ್ ಅವರು ಶುಕ್ರವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ಫಲಿತಾಂಶ ಬಂದಾಗಿನಿಂದ, ಸಂಜಯ್ ರೌತ್ ಶಿವಸೇನೆ ಪರವಾಗಿ ಬಿಜೆಪಿ ವಿರುದ್ಧ ನಿರಂತರ ವಾಗ್ಧಾಳಿ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿನೆಯ ಕಸರತ್ತು ಅಂತಿಮ ಹಂತವನ್ನು ತಲುಪಿದೆ. ಶುಕ್ರವಾರ, ದಿನವಿಡೀ ಈ ಬಗ್ಗೆ ಸಭೆಗಳು ನಡೆಯುವ ಸಾಧ್ಯತೆಯಿದ್ದು, ಸಂಜೆಯ ವೇಳೆಗೆ ಸರ್ಕಾರ ರಚನೆಯ ಬಗ್ಗೆ ದೊಡ್ಡ ಪ್ರಕಟಣೆ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.