ವಧುವಿಗೆ ವಾಟ್ಸಪ್ ಚಟ; ಮದುವೆ ಬೇಡ ಎಂದ ವರ!
ವಧು ಮದುವೆಗೆ ಮುನ್ನವೇ ಹೆಚ್ಚು ವಾಟ್ಸಪ್ ಸಂದೇಶ ಕಳುಹಿಸುತ್ತಾಳೆ. ಆಕೆಗೆ ವಾಟ್ಸಪ್ ಚಟ ಜಾಸ್ತಿ ಎಂದು ಆರೋಪಿಸಿ ವರ ಮದುವೆಯನ್ನೇ ರದ್ಧುಪಡಿಸಿದ್ದಾನೆ.
ಲಕ್ನೋ: ಸದಾ ಕಾಲ ವಾಟ್ಸ್ ಆಪ್ ಬಳಕೆಯಲ್ಲೇ ತಲ್ಲಿನರಾಗಿರುತ್ತಾಳೆ ಎಂದು ಆರೋಪಿಸಿ ವರನೋರ್ವ ಮದುವೆಯನ್ನೇ ನಿರಾಕರಿಸಿದ ಘಟನೆ ಉತ್ತರಪ್ರದೇಶದ ಅವ್ರೋಹಾ ಜಿಲ್ಲೆಯಲ್ಲಿ ನಡೆದಿದೆ.
ಸೆಪ್ಟೆಂಬರ್ 5 ರಂದು ವಧುವಿನ ಮನೆಗೆ ವರನ ಕಡೆಯವರು ಹೋಗಬೇಕಿತ್ತು. ಆದರೆ, ಸಂಜೆಯಾದರೂ ಅವರು ಬಾರದ ಕಾರಣ ವಧುವಿನ ಮನೆಯವರು ವರನ ತಂದೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಮದುವೆ ರದ್ದು ಮಾಡಿರುವುದಾಗಿ ತಿಳಿಸಿದ್ದಾನೆ. ಇದಕ್ಕೆ ಆತ ಕೊಟ್ಟ ಕಾರಣ ಏನು ಗೊತ್ತೇ? ವಧು ಮದುವೆಗೆ ಮುನ್ನವೇ ಹೆಚ್ಚು ವಾಟ್ಸಪ್ ಬಳಕೆ ಮಾಡುತ್ತಾಳೆ. ಇದು ವರನಿಗೆ ಇಷ್ಟವಾಗಿಲ್ಲ ಎಂಬುದು!
ಆದರೆ, ಇದು ಮದುವೆ ನಿಲ್ಲಲು ನಿಜವಾದ ಕಾರಣವಲ್ಲ ಎಂದಿರುವ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿರುವಂತೆ, ವರನ ಕಡೆಯವರು 65 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಇದು ನೆರವೇರದ ಕಾರಣ ಕಡೇ ಗಳಿಗೆಯಲ್ಲಿ ಮದುವೆ ರದ್ದುಗೊಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.